Skip to content

"ಅಲ್ಲಾಹು ಹೇಳುತ್ತಾನೆ: ಪುನರುತ್ಥಾನದ ದಿನ ಮೂರು ವಿಧದ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ಅಲ್ಲಾಹು ಹೇಳುತ್ತಾನೆ: ಪುನರುತ್ಥಾನದ ದಿನ ಮೂರು ವಿಧದ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ: ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ (ಒಪ್ಪಂದ ಮಾಡಿಕೊಂಡು) ನಂತರ ದ್ರೋಹ ಮಾಡಿದವನು; ಸ್ವತಂತ್ರ ವ್ಯಕ್ತಿಯನ್ನು ಮಾರಿ ಆ ಹಣವನ್ನು ತಿಂದವನು; ಮತ್ತು ಒಬ್ಬ ಕೂಲಿಕಾರನನ್ನು ಕೆಲಸಕ್ಕೆ ನೇಮಿಸಿಕೊಂಡು, ಅವನಿಂದ ಪೂರ್ತಿ ಕೆಲಸ ಮಾಡಿಸಿಕೊಂಡು, ನಂತರ ಅವನ ಕೂಲಿಯನ್ನು ನೀಡದವನು."

«قَالَ اللَّهُ تَعَالَى: ثَلاَثَةٌ أَنَا خَصْمُهُمْ يَوْمَ القِيَامَةِ: رَجُلٌ أَعْطَى بِي ثُمَّ غَدَرَ، وَرَجُلٌ بَاعَ حُرًّا فَأَكَلَ ثَمَنَهُ، وَرَجُلٌ اسْتَأْجَرَ أَجِيرًا فَاسْتَوْفَى مِنْهُ وَلَمْ يُعْطِهِ أَجْرَهُ».

ಇದನ್ನು ಬುಖಾರಿ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೀಗೆ ಹೇಳುತ್ತಾನೆ: "ಪುನರುತ್ಥಾನದ ದಿನ ಮೂರು ಬಗೆಯ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ. ನಾನು ಯಾರಿಗೆ ಎದುರಾಳಿಯಾಗುತ್ತೇನೋ, ಅವರನ್ನು ನಾನು (ನನ್ನ ವಾದದಿಂದ) ಸೋಲಿಸುತ್ತೇನೆ." ಮೊದಲನೆಯವನು: (ಅಲ್ಲಾಹನ ಹೆಸರಿನಲ್ಲಿ) ಪ್ರಮಾಣ ಮಾಡಿ ವಾಗ್ದಾನ ನೀಡಿ, ನಂತರ ಆ ಒಪ್ಪಂದವನ್ನು ಮುರಿದು ದ್ರೋಹ ಎಸಗಿದವನು. ಎರಡನೆಯವನು: ಒಬ್ಬ ಸ್ವತಂತ್ರ ವ್ಯಕ್ತಿಯನ್ನು ಗುಲಾಮನೆಂದು ಸುಳ್ಳು ಹೇಳಿ ಮಾರಿ, ಆ ಹಣವನ್ನು ತಿಂದು, ಅದನ್ನು ಬಳಸಿಕೊಂಡವನು. ಮೂರನೆಯವನು: ಕೆಲಸಕ್ಕಾಗಿ ಒಬ್ಬ ಕೂಲಿಕಾರನನ್ನು ನೇಮಿಸಿಕೊಂಡು, ಅವನಿಂದ ಪೂರ್ತಿ ಕೆಲಸವನ್ನು ಪಡೆದುಕೊಂಡು, ಅವನ ಕೆಲಸದ ಕೂಲಿಯನ್ನು ನೀಡದವನು.

ಹದೀಸಿನ ಪ್ರಯೋಜನಗಳು

ಈ ಹದೀಸ್ ಅನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡಿದ್ದಾರೆ. ಇದನ್ನು 'ಹದೀಸ್ ಕುದ್ಸಿ' ಅಥವಾ 'ಇಲಾಹಿ' ಎಂದು ಕರೆಯಲಾಗುತ್ತದೆ. ಇದರ ಪದಗಳು ಮತ್ತು ಅರ್ಥ ಅಲ್ಲಾಹನಿಂದಲೇ ಬಂದಿರುತ್ತವೆ. ಆದರೆ ಕುರ್‌ಆನ್‌ಗೆ ಇರುವ ವಿಶೇಷತೆಗಳು (ಉದಾಹರಣೆಗೆ: ಪಠಿಸುವುದೇ ಆರಾಧನೆಯಾಗಿರುವುದು, ಶುದ್ಧಿಯೊಂದಿಗೆ ಮುಟ್ಟುವುದು, ಪವಾಡ ಸದೃಶವಾಗಿರುವುದು ಇತ್ಯಾದಿ) ಇದಕ್ಕೆ ಇರುವುದಿಲ್ಲ.

ಅಸ್ಸಿಂದಿ ಹೇಳುತ್ತಾರೆ: "ಮೂವರು ಎಂದು ಇಲ್ಲಿ ಉಲ್ಲೇಖಿಸಿರುವುದು ಕೇವಲ ಇವರಿಗಷ್ಟೇ ಸೀಮಿತ ಎಂದಲ್ಲ. ಏಕೆಂದರೆ ಅಲ್ಲಾಹು ಎಲ್ಲಾ ಅಕ್ರಮಿಗಳಿಗೂ ಎದುರಾಳಿಯಾಗಿದ್ದಾನೆ. ಆದರೆ ಈ ಮೂವರು ಎಸಗುವ ಪಾಪದ ಗಂಭೀರತೆಯನ್ನು (ತೀವ್ರತೆಯನ್ನು) ತಿಳಿಸಲು ಹೀಗೆ ಹೇಳಲಾಗಿದೆ."

ಇಬ್ನುಲ್-ಜೌಝಿ ಹೇಳುತ್ತಾರೆ: "ಸ್ವತಂತ್ರ ವ್ಯಕ್ತಿಯು ಅಲ್ಲಾಹನ ದಾಸನಾಗಿರುತ್ತಾನೆ. ಯಾರು ಅವನ ಮೇಲೆ ದೌರ್ಜನ್ಯ ಎಸಗುತ್ತಾನೋ, ಅವನ ಯಜಮಾನನಾದ ಅಲ್ಲಾಹು ಅವನಿಗೆ ಎದುರಾಳಿಯಾಗುತ್ತಾನೆ."

ಅಲ್-ಖತ್ತಾಬಿ ಹೇಳುತ್ತಾರೆ: "ಸ್ವತಂತ್ರ ವ್ಯಕ್ತಿಯನ್ನು ಗುಲಾಮನನ್ನಾಗಿ ಮಾಡುವುದು ಎರಡು ರೀತಿಯಲ್ಲಿ ಸಂಭವಿಸುತ್ತದೆ: 1. ಗುಲಾಮನೊಬ್ಬನಿಗೆ ಬಿಡುಗಡೆ ನೀಡಿ (ಸ್ವತಂತ್ರಗೊಳಿಸಿ), ನಂತರ ಅದನ್ನು ಮುಚ್ಚಿಡುವುದು ಅಥವಾ ನಿರಾಕರಿಸುವುದು. 2. ಬಿಡುಗಡೆ ನೀಡಿದ ನಂತರವೂ ಬಲವಂತವಾಗಿ ಅವನಿಂದ ಗುಲಾಮಗಿರಿ ಮಾಡಿಸಿಕೊಳ್ಳುವುದು. ಇವುಗಳಲ್ಲಿ ಮೊದಲನೆಯದು ಅತ್ಯಂತ ಕೆಟ್ಟದ್ದಾಗಿದೆ." ನಾನು ಹೇಳುತ್ತೇನೆ: ಈ ಹದೀಸ್‌ನಲ್ಲಿ ಬಂದಿರುವ ವಿಷಯವು ಅಲ್-ಖತ್ತಾಬಿ ಹೇಳಿರುವುದಕ್ಕಿಂತಲೂ ಹೆಚ್ಚು ಗಂಭೀರವಾದುದಾಗಿದೆ. ಏಕೆಂದರೆ ಇದರಲ್ಲಿ ಬಿಡುಗಡೆ ನೀಡಿದ್ದನ್ನು ಮುಚ್ಚಿಡುವುದರ ಜೊತೆಗೆ, ಅವನನ್ನು ಮಾರಾಟ ಮಾಡಿ ಆ ಹಣವನ್ನು ತಿನ್ನುವುದು ಸೇರಿದೆ. ಆದ್ದರಿಂದ ಇದರಲ್ಲಿರುವ ಬೆದರಿಕೆ ಅತ್ಯಂತ ಕಠಿಣವಾದುದಾಗಿದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (3/ 90) (2270).

ಇನ್ನಷ್ಟು (3)

فتح ذي الجلال والإكرام بشرح بلوغ المرام (4/ 252).

إرشاد الساري لشرح صحيح البخاري (4/ 108).

مرشد ذوي الحجا والحاجة إلى سنن ابن ماجه والقول المكتفى على سنن المصطفى (14/ 211).