قُلۡ مَن رَّبُّ ٱلسَّمَٰوَٰتِ وَٱلۡأَرۡضِ قُلِ ٱللَّهُۚ قُلۡ أَفَٱتَّخَذۡتُم مِّن دُونِهِۦٓ أَوۡلِيَآءَ لَا يَمۡلِكُونَ لِأَنفُسِهِمۡ نَفۡعٗا وَلَا ضَرّٗاۚ قُلۡ هَلۡ يَسۡتَوِي ٱلۡأَعۡمَىٰ وَٱلۡبَصِيرُ أَمۡ هَلۡ تَسۡتَوِي ٱلظُّلُمَٰتُ وَٱلنُّورُۗ أَمۡ جَعَلُواْ لِلَّهِ شُرَكَآءَ خَلَقُواْ كَخَلۡقِهِۦ فَتَشَٰبَهَ ٱلۡخَلۡقُ عَلَيۡهِمۡۚ قُلِ ٱللَّهُ خَٰلِقُ كُلِّ شَيۡءٖ وَهُوَ ٱلۡوَٰحِدُ ٱلۡقَهَّٰرُ
ಕೇಳಿರಿ: “ಭೂಮ್ಯಾಕಾಶಗಳ ಪರಿಪಾಲಕ ಯಾರು?” ಹೇಳಿರಿ: “ಅಲ್ಲಾಹು.” ಕೇಳಿರಿ: “ಆದರೂ ನೀವು ಅವನನ್ನು ಬಿಟ್ಟು ಸ್ವಯಂ ಉಪಕಾರ ಅಥವಾ ತೊಂದರೆ ಮಾಡಲು ಕೂಡ ಸಾಧ್ಯವಿಲ್ಲದವರನ್ನು ರಕ್ಷಕರಾಗಿ ಸ್ವೀಕರಿಸಿದ್ದೀರಾ?” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರಾಗಲು ಸಾಧ್ಯವೇ? ಅಂಧಕಾರಗಳು ಮತ್ತು ಬೆಳಕು ಸಮಾನವಾಗಲು ಸಾಧ್ಯವೇ? ಇವರು ಅಲ್ಲಾಹನೊಂದಿಗೆ ಸಹಭಾಗಿಗಳಾಗಿ ಮಾಡಿದ ಆ ದೇವರುಗಳು ಕೂಡ ಅಲ್ಲಾಹು ಸೃಷ್ಟಿಸುವಂತೆಯೇ ಸೃಷ್ಟಿಸಿ, ಇವರಿಗೆ (ಎರಡೂ ಕಡೆಯ) ಸೃಷ್ಟಿಗಳು ಪರಸ್ಪರ ಸಮಾನವಾಗಿ ಕಾಣುತ್ತಿದೆಯೇ?” ಹೇಳಿರಿ: “ಅಲ್ಲಾಹನೇ ಎಲ್ಲಾ ಸೃಷ್ಟಿಗಳ ಸೃಷ್ಟಿಕರ್ತ. ಅವನು ಏಕೈಕನು ಮತ್ತು ಮಹಾ ಶಕ್ತಿಶಾಲಿಯಾಗಿದ್ದಾನೆ.”
- ಸೃಷ್ಟಿಕರ್ತನು ಏಕೈಕ ದೇವನಾದ ಅಲ್ಲಾಹು ಮಾತ್ರ. ಇದನ್ನು ಬಹುದೇವವಿಶ್ವಾಸಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಅಲ್ಲಾಹನ ಹೊರತಾಗಿ ಬೇರೆ ಸೃಷ್ಟಿಕರ್ತನು ಇರುತ್ತಿದ್ದರೆ, ಇಬ್ಬರ ಸೃಷ್ಟಿಗಳು ಬೇರೆ ಬೇರೆಯಾಗಿಯೇ ಇರುತ್ತಿದ್ದವು. ಜಗತ್ತಿನಲ್ಲಿರುವ ಸೃಷ್ಟಿಗಳಲ್ಲಿ ಇಂತಹ ಯಾವುದೇ ವಿರೋಧಾಭಾಸ ನಮಗೆ ಕಂಡುಬರುವುದಿಲ್ಲವಾದ್ದರಿಂದ ಇಬ್ಬರು ಸೃಷ್ಟಿಕರ್ತರೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಒಂದೇ ರೀತಿಯಲ್ಲಿ ಸೃಷ್ಟಿಸುತ್ತಿದ್ದಾರೆಂದು ಹೇಳಬೇಕಾಗುತ್ತದೆ. ಇದು ಅಸಂಭವ್ಯವಾಗಿದೆ.