وَمِنَ ٱلنَّاسِ مَن يَتَّخِذُ مِن دُونِ ٱللَّهِ أَندَادٗا يُحِبُّونَهُمۡ كَحُبِّ ٱللَّهِۖ وَٱلَّذِينَ ءَامَنُوٓاْ أَشَدُّ حُبّٗا لِّلَّهِۗ وَلَوۡ يَرَى ٱلَّذِينَ ظَلَمُوٓاْ إِذۡ يَرَوۡنَ ٱلۡعَذَابَ أَنَّ ٱلۡقُوَّةَ لِلَّهِ جَمِيعٗا وَأَنَّ ٱللَّهَ شَدِيدُ ٱلۡعَذَابِ
ಅಲ್ಲಾಹನಿಗೆ ಇತರರನ್ನು ಸರಿಸಾಟಿಯಾಗಿ ಮಾಡುವ ಕೆಲವರಿದ್ದಾರೆ. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಅವರನ್ನೂ ಪ್ರೀತಿಸುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು (ಎಲ್ಲಕ್ಕಿಂತಲೂ) ಗಾಢವಾಗಿ ಪ್ರೀತಿಸುತ್ತಾರೆ. ಅಕ್ರಮಿಗಳು (ಅಲ್ಲಾಹನ) ಶಿಕ್ಷೆಯನ್ನು ನೇರವಾಗಿ ನೋಡುವಾಗ, ಶಕ್ತಿ-ಸಾಮರ್ಥ್ಯವಿರುವುದು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ; ಮತ್ತು ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆಂದು ತಿಳಿಯುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
- ಮಕ್ಕಾದ ಬಹುದೇವ ವಿಶ್ವಾಸಿಗಳು ಅಲ್ಲಾಹನಿಗೆ ಸಹಭಾಗಿಗಳನ್ನು ಕಲ್ಪಿಸಿಕೊಂಡು ಅವರನ್ನು ಆರಾಧಿಸುತ್ತಿದ್ದರು. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಆ ದೇವರುಗಳನ್ನು ಕೂಡ ಪ್ರೀತಿಸುತ್ತಿದ್ದರು. ಈ ಸನ್ನಿವೇಶವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಕ್ಕೆ ಮಾತ್ರ ಸೀಮಿತವಲ್ಲ. ಆಧುನಿಕ ಕಾಲದಲ್ಲೂ ಇದನ್ನು ಕಾಣಬಹುದಾಗಿದೆ. ತಮ್ಮನ್ನು ಮುಸ್ಲಿಮರೆಂದು ಕರೆಯುವವರಲ್ಲೂ ಈ ರೋಗವು ಕಾಣಿಸಿಕೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಮಹಾಪುರುಷರು ಮತ್ತು ಅವರ ಸಮಾಧಿಗಳನ್ನು ಆರಾಧಿಸುತ್ತಾರೆ. ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂದು ಹೇಳಿದರೆ ಮಕ್ಕಾದ ಬಹುದೇವ ವಿಶ್ವಾಸಿಗಳಂತೆ ಇವರಿಗೂ ಕೂಡ ಕೋಪ ಬರುತ್ತದೆ.