ثلاثة الأصول وأدلتها
هذا الكتاب هو متن صغير أساسي يبين فيه التوحيد والدين والنبوة، يبين هذه المعاني الثلاثة الأساسية المهمة في فهم العقيدة، وفي دراستها دراسة سليمة وصحيحة. وهو كتاب مختصر، لكنه كتاب مبارك؛ لأنه سهل العبارة ومركز وموجه، وليس فيه أي تعقيد أو إشكالات. فالإنسان بمجرد أن يقرأ الكتاب يستطيع أن يفهمه، ويستطيع أن يعرف المعاني المتضمنة فيه. هذا الكتاب قبل أن يبدأ الشيخ في الأصول الثلاثة قدم لذلك بأربعة مسائل، ثم بعد ذلك بثلاثة مسائل أخرى، ثم شرع في الأصول الثلاثة، وهي التي يجب على كل مسلم أن يتعلمها، وهي التي يسأل عنها العبد في قبره: من ربك؟ وما دينك؟ ومن نبيك؟ ألفها رحمه الله للمبتدئين واجتهد في تسهيلها واختصارها حتى خرجت بأحسن حلة وأعظم فائدة؛ يفهم بها الصغير، ولا يستغني عنها الكبير فعم نفعها، وكثر خيرها؛ لعظم قدر موضوعاتها وشرف محتواها.
ಮೂರು ಮೂಲಭೂತ ತತ್ವಗಳು ಮತ್ತು ಅವುಗಳ ಪುರಾವೆಗಳು
ಶೈಖ್ ಮುಹಮ್ಮದ್ ಅತ್ತಮೀಮಿ (ಅಲ್ಲಾಹು ಅವರ ಮೇಲೆ ಕರುಣೆ ತೊರಲಿ)
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ತಿಳಿಯಿರಿ - ಅಲ್ಲಾಹು ನಿಮ್ಮ ಮೇಲೆ ಕರುಣೆ ತೋರಲಿ - ಖಂಡಿತವಾಗಿಯೂ ನಾಲ್ಕು ವಿಷಯಗಳನ್ನು ಕಲಿಯುವುದು ನಮಗೆ ಕಡ್ಡಾಯವಾಗಿದೆ:
ಮೊದಲನೆಯದು: ಜ್ಞಾನ (ಇಲ್ಮ್). ಅಂದರೆ: ಅಲ್ಲಾಹನನ್ನು ಅರಿಯುವುದು, ಅವನ ಪ್ರವಾದಿಯನ್ನು ಅರಿಯುವುದು ಮತ್ತು ಇಸ್ಲಾಮ್ ಧರ್ಮವನ್ನು ಪುರಾವೆಗಳ ಮೂಲಕ ಅರಿಯುವುದು.
ಎರಡನೆಯದು: ಅದರಂತೆ ಕಾರ್ಯವೆಸಗುವುದು.
ಮೂರನೆಯದು: ಅದರ ಕಡೆಗೆ (ಜನರನ್ನು) ಆಹ್ವಾನಿಸುವುದು.
ನಾಲ್ಕನೆಯದು: ಅದರಲ್ಲಿ ಎದುರಾಗುವ ತೊಂದರೆಗಳಿಗೆ ತಾಳ್ಮೆ ವಹಿಸುವುದು
ಇದಕ್ಕೆ ಆಧಾರ ಅಲ್ಲಾಹನ ಈ ವಚನ: ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. "ಕಾಲದ ಮೇಲಾಣೆ! ಖಂಡಿತವಾಗಿಯೂ ಮನುಷ್ಯನು ನಷ್ಟದಲ್ಲಿದ್ದಾನೆ. ವಿಶ್ವಾಸವಿಟ್ಟವರು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರನ್ನು ಹೊರತುಪಡಿಸಿ." [ಅಲ್-ಅಸ್ರ್: 1-3].
ಇಮಾಮ್ ಶಾಫಿಈ (ರಹಿಮಹುಲ್ಲಾ) ಹೇಳಿದ್ದಾರೆ: "ಒಂದು ವೇಳೆ ಅಲ್ಲಾಹು ತನ್ನ ಸೃಷ್ಟಿಯ ಮೇಲೆ ಈ ಒಂದೇ ಸೂರವನ್ನು (ಅಧ್ಯಾಯವನ್ನು) ಹೊರತುಪಡಿಸಿ ಬೇರೆ ಯಾವುದೇ ಆಧಾರವನ್ನು ಇಳಿಸದಿದ್ದರೂ, ಇದು ಅವರಿಗೆ ಸಾಕಾಗುತ್ತಿತ್ತು."
ಇಮಾಮ್ ಬುಖಾರಿ (ರಹಿಮಹುಲ್ಲಾ) ಹೇಳಿದ್ದಾರೆ: "ಅಧ್ಯಾಯ: ಮಾತನಾಡುವುದಕ್ಕಿಂತ ಮತ್ತು ಕಾರ್ಯವೆಸಗುವುದಕ್ಕಿಂತ ಮೊದಲು ಜ್ಞಾನವನ್ನು ಹೊಂದಿರಬೇಕು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: “ಆದ್ದರಿಂದ ತಿಳಿಯಿರಿ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯರಿಲ್ಲವೆಂದು ಮತ್ತು ನಿಮ್ಮ ಪಾಪಕ್ಕಾಗಿ ಕ್ಷಮೆ ಯಾಚಿಸಿರಿ” (ಮುಹಮ್ಮದ್: 9). ಹೀಗೆ ಅಲ್ಲಾಹು ಮಾತು ಮತ್ತು ಕರ್ಮಕ್ಕಿಂತ ಮೊದಲು ಜ್ಞಾನದಿಂದ ಆರಂಭಿಸಿದ್ದಾನೆ."
ತಿಳಿಯಿರಿ - ಅಲ್ಲಾಹು ನಿಮ್ಮ ಮೇಲೆ ಕರುಣೆ ತೋರಲಿ - ಪ್ರತಿಯೊಬ್ಬ ಮುಸ್ಲಿಂ ಪುರುಷ ಮತ್ತು ಮಹಿಳೆಯು ಈ ಮೂರು ವಿಷಯಗಳನ್ನು ಕಲಿಯುವುದು ಮತ್ತು ಅವುಗಳ ಆಧಾರದಲ್ಲಿ ಕಾರ್ಯವೆಸಗುವುದು ಕಡ್ಡಾಯವಾಗಿದೆ:
ಮೊದಲನೆಯದು: ಖಂಡಿತವಾಗಿಯೂ ಅಲ್ಲಾಹು ನಮ್ಮನ್ನು ಸೃಷ್ಟಿಸಿದನು, ನಮಗೆ ಅನ್ನಾಹಾರಗಳನ್ನು ನೀಡಿದನು ಮತ್ತು ನಮ್ಮನ್ನು ಅವನು ಸುಮ್ಮನೆ (ಉದ್ದೇಶವಿಲ್ಲದೆ) ಬಿಡಲಿಲ್ಲ; ಬದಲಾಗಿ ನಮ್ಮ ಬಳಿಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದನು. ಯಾರು ಸಂದೇಶವಾಹಕರಿಗೆ ವಿಧೇಯರಾಗುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುವರು, ಮತ್ತು ಯಾರು ಅವರಿಗೆ ಅವಿಧೇಯರಾಗುತ್ತಾರೋ ಅವರು ನರಕವನ್ನು ಪ್ರವೇಶಿಸುವರು.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ನಾವು ಫರೋಹನ ಬಳಿಗೆ ಒಬ್ಬ ಸಂದೇಶವಾಹಕನನ್ನು ಕಳುಹಿಸಿದಂತೆಯೇ, ನಿಮ್ಮ ಬಳಿಗೂ ನಿಮ್ಮ ಮೇಲೆ ಸಾಕ್ಷಿಯಾಗಿ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಆದರೆ ಫರೋಹನು ಆ ಸಂದೇಶವಾಹಕರಿಗೆ ಅವಿಧೇಯನಾದನು, ಆಗ ನಾವು ಅವನನ್ನು ಅತ್ಯಂತ ಕಠಿಣವಾಗಿ ಹಿಡಿದು ಶಿಕ್ಷಿಸಿದೆವು." [ಅಲ್-ಮುಝ್ಝಮ್ಮಿಲ್:15-16]
ಎರಡನೆಯದು: ತನ್ನ ಆರಾಧನೆಯಲ್ಲಿ ತನ್ನೊಂದಿಗೆ ಬೇರೆ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡುವುದನ್ನು (ಶಿರ್ಕ್ ಮಾಡುವುದನ್ನು) ಅಲ್ಲಾಹು ಎಂದಿಗೂ ಇಷ್ಟಪಡುವುದಿಲ್ಲ; ಅದು ಸಾಮೀಪ್ಯ ಪಡೆದ ಮಲಕ್ (ದೇವದೂತ) ಆಗಿದ್ದರೂ ಅಥವಾ ಕಳುಹಿಸಲ್ಪಟ್ಟ ಪ್ರವಾದಿಯಾಗಿದ್ದರೂ ಸಹ. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ಮಸೀದಿಗಳು (ಆರಾಧನಾ ಸ್ಥಳಗಳು) ಅಲ್ಲಾಹನಿಗೆ ಸೇರಿದ್ದಾಗಿವೆ; ಆದ್ದರಿಂದ ಅಲ್ಲಾಹನೊಂದಿಗೆ ಬೇರೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ." [ಅಲ್-ಜಿನ್ನ್: 18]
ಮೂರನೆಯದು: ಯಾರು ಸಂದೇಶವಾಹಕರನ್ನು ಅನುಸರಿಸುತ್ತಾರೋ ಮತ್ತು ಅಲ್ಲಾಹನ ಏಕತ್ವದಲ್ಲಿ (ತೌಹೀದ್) ವಿಶ್ವಾಸವಿಡುತ್ತಾರೋ, ಅವರಿಗೆ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೊಡನೆ ಸ್ನೇಹ (ಸಂಬಂಧ) ಬೆಳೆಸಲು ಅನುಮತಿಯಿಲ್ಲ, ಅವರು ಎಷ್ಟೇ ಹತ್ತಿರದ ಸಂಬಂಧಿಯಾಗಿದ್ದರೂ ಸರಿಯೇ.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ಜನರು, ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೊಡನೆ ಸ್ನೇಹ ಬೆಳೆಸುವುದನ್ನು ನೀವು ಕಾಣಲಾರಿರಿ - ಅವರು ಅವರ ತಂದೆಯಂದಿರಾಗಿದ್ದರೂ, ಮಕ್ಕಳಾಗಿದ್ದರೂ, ಸಹೋದರರಾಗಿದ್ದರೂ ಅಥವಾ ಅವರ ಕುಟುಂಬದವರಾಗಿದ್ದರೂ ಸರಿಯೇ. ಇಂತಹವರ ಹೃದಯಗಳಲ್ಲಿ ಅಲ್ಲಾಹು ವಿಶ್ವಾಸವನ್ನು ದಾಖಲಿಸಿದ್ದಾನೆ ಮತ್ತು ತನ್ನ ಕಡೆಯ ಆತ್ಮದ ಮೂಲಕ ಅವರನ್ನು ಬಲಪಡಿಸಿದ್ದಾನೆ. ಅವನು ಅವರನ್ನು, ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗಗಳಿಗೆ ಸೇರಿಸುವನು. ಅವರು ಅದರಲ್ಲಿ ಶಾಶ್ವತವಾಗಿರುವರು. ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಿದ್ದಾನೆ ಮತ್ತು ಅವರು ಅವನ ಬಗ್ಗೆ ಸಂತೃಪ್ತರಾಗಿದ್ದಾರೆ. ಅವರೇ ಅಲ್ಲಾಹನ ಗುಂಪಿನವರು. ತಿಳಿಯಿರಿ! ಖಂಡಿತವಾಗಿಯೂ ಅಲ್ಲಾಹನ ಗುಂಪಿನವರೇ ವಿಜಯಶಾಲಿಗಳು." [ಅಲ್-ಮುಜಾದಿಲ: 22].
ತಿಳಿಯಿರಿ – ಅಲ್ಲಾಹು ತನ್ನ ವಿಧೇಯತೆಯೆಡೆಗೆ ನಿಮಗೆ ಮಾರ್ಗದರ್ಶನ ನೀಡಲಿ: ಹನೀಫಿಯ್ಯ - ಅಂದರೆ ಇಬ್ರಾಹೀಮ್ (ಅ) ರವರ ಮಾರ್ಗವು: ಧರ್ಮವನ್ನು (ಆರಾಧನೆಯನ್ನು) ಅಲ್ಲಾಹನಿಗೆ ಮಾತ್ರ ಮೀಸಲಿಟ್ಟು ಅವನೊಬ್ಬನನ್ನೇ ಆರಾಧಿಸುವುದಾಗಿದೆ. ಅಲ್ಲಾಹು ಜನರೆಲ್ಲರಿಗೂ ಇದನ್ನೇ ಆದೇಶಿಸಿದ್ದಾನೆ ಮತ್ತು ಇದಕ್ಕಾಗಿಯೇ ಅವನು ಅವರನ್ನು ಸೃಷ್ಟಿಸಿದ್ದಾನೆ. ಅವನು ಹೇಳುತ್ತಾನೆ: "ನಾನು ಜಿನ್ನ್‌ಗಳನ್ನು ಹಾಗೂ ಮಾನವರನ್ನು ನನ್ನನ್ನು ಆರಾಧಿಸಲಿಕ್ಕಾಗಿ ಹೊರತು ಬೇರೆ ಯಾವುದಕ್ಕೂ ಸೃಷ್ಟಿಸಿಲ್ಲ." (ಅದ್ದಾರಿಯಾತ್: 56) "ನನ್ನನ್ನು ಆರಾಧಿಸಲಿಕ್ಕಾಗಿ" ಎಂಬುದರ ಅರ್ಥ "ನನ್ನ ಏಕತ್ವದಲ್ಲಿ (ತೌಹೀದ್) ವಿಶ್ವಾಸವಿಡುವುದಕ್ಕಾಗಿ."
ಅಲ್ಲಾಹು ಆಜ್ಞಾಪಿಸಿದ ಅತ್ಯಂತ ಪ್ರಮುಖ ವಿಷಯವೆಂದರೆ ತೌಹೀದ್. ಅಂದರೆ, ಆರಾಧನೆಗಳನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸುವುದು.
ಅವನು ನಿಷೇಧಿಸಿದ ಅತ್ಯಂತ ಪ್ರಮುಖ ವಿಷಯವೆಂದರೆ ಶಿರ್ಕ್. ಅಂದರೆ ಅವನೊಂದಿಗೆ ಇತರರನ್ನು ಕರೆದು ಪ್ರಾರ್ಥಿಸುವುದು.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ನೀವು ಅಲ್ಲಾಹನನ್ನೇ ಆರಾಧಿಸಿರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ..." [ಅನ್ನಿಸಾ: 36].
ಹೀಗಿರುವಾಗ, "ಮನುಷ್ಯನು ತಿಳಿಯಲೇಬೇಕಾದ ಆ ಮೂರು ಮೂಲಭೂತ ತತ್ವಗಳು ಯಾವುವು?" ಎಂದು ನಿಮ್ಮಲ್ಲಿ ಕೇಳಲಾದರೆ,
ನೀವು ಹೀಗೆ ಹೇಳಿರಿ: ದಾಸನು ತನ್ನ ರಬ್ಬ್ (ಪರಿಪಾಲಕ) ನನ್ನು ಅರಿಯುವುದು, ತನ್ನ ಧರ್ಮವನ್ನು ಅರಿಯುವುದು ಮತ್ತು ತನ್ನ ಪ್ರವಾದಿ ಮುಹಮ್ಮದ್ ﷺ ರವರನ್ನು ಅರಿಯುವುದು.
[ಮೊದಲನೆಯ ಮೂಲತತ್ವ]
ಒಂದು ವೇಳೆ ನಿಮ್ಮಲ್ಲಿ: "ನಿಮ್ಮ ರಬ್ಬ್ (ಒಡೆಯ) ಯಾರು?" ಎಂದು ಕೇಳಲಾದರೆ,
ನೀವು ಹೀಗೆ ಹೇಳಿರಿ: "ನನ್ನ ರಬ್ಬ್ (ಒಡೆಯ) ಅಲ್ಲಾಹು. ಅವನೇ ನನ್ನನ್ನು ಮತ್ತು ತನ್ನ ಅನುಗ್ರಹಗಳಿಂದ ಸಮಸ್ತ ಲೋಕಗಳನ್ನು ಪರಿಪಾಲನೆ ಮಾಡುವವನು. ಅವನೇ ನನ್ನ ಆರಾಧ್ಯನು, ಅವನ ಹೊರತು ನನಗೆ ಬೇರೆ ಯಾವ ಆರಾಧ್ಯನೂ ಇಲ್ಲ." ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಸರ್ವಲೋಕಗಳ ಪರಿಪಾಲಕ (ರಬ್ಬ್) ನಾದ ಅಲ್ಲಾಹನಿಗೆ ಸರ್ವಸ್ತುತಿ." [ಅಲ್-ಫಾತಿಹ: 2]. ಅಲ್ಲಾಹನನ್ನು ಹೊರತುಪಡಿಸಿ ಉಳಿದೆಲ್ಲವೂ 'ಸೃಷ್ಟಿ' ಆಗಿದ್ದು, ನಾನು ಆ ಸೃಷ್ಟಿಯ ಒಂದು ಭಾಗವಾಗಿದ್ದೇನೆ.
ಒಂದು ವೇಳೆ ನಿಮ್ಮಲ್ಲಿ: "ನೀವು ನಿಮ್ಮ ರಬ್ಬ್ (ಒಡೆಯ) ನನ್ನು ಹೇಗೆ ಅರಿತಿರಿ?" ಎಂದು ಕೇಳಲಾದರೆ,
ನೀವು ಹೀಗೆ ಹೇಳಿರಿ: "ಅವನ ದೃಷ್ಟಾಂತಗಳಿಂದ ಮತ್ತು ಅವನ ಸೃಷ್ಟಿಗಳಿಂದ."
ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರ ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ.
ಏಳು ಆಕಾಶಗಳು ಮತ್ತು ಅವುಗಳಲ್ಲಿರುವವರೆಲ್ಲರೂ, ಏಳು ಭೂಮಿಗಳು ಮತ್ತು ಅವುಗಳಲ್ಲಿರುವವರೆಲ್ಲರೂ ಹಾಗೂ ಅವೆರಡರ ಮಧ್ಯೆ ಇರುವುದೆಲ್ಲವೂ ಅವನ ಸೃಷ್ಟಿಗಳಲ್ಲಿ ಸೇರಿವೆ.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರ ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಸೂರ್ಯನಿಗಾಗಲೀ, ಚಂದ್ರನಿಗಾಗಲೀ ನೀವು ಸುಜೂದ್ (ಸಾಷ್ಟಾಂಗ) ಮಾಡಬೇಡಿರಿ. ಬದಲಾಗಿ ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ನೀವು ಸುಜೂದ್ ಮಾಡಿರಿ; ನೀವು ಅವನೊಬ್ಬನನ್ನೇ ಆರಾಧಿಸುವವರಾಗಿದ್ದರೆ." [ಫುಸ್ಸಿಲತ್: 37].
ಮತ್ತು ಅಲ್ಲಾಹನ ಈ ವಚನ: "ಖಂಡಿತವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ರಬ್ಬ್ (ಒಡೆಯ). ನಂತರ ಅವನು ಅರ್ಶ್‌ನ ಮೇಲೆ ಆರೂಢನಾದನು. ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ. ಆಗ ಅದು ಕ್ಷಿಪ್ರಗತಿಯಲ್ಲಿ ಹಗಲನ್ನು ಹುಡುಕುತ್ತಾ ಸಾಗುತ್ತದೆ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳೆಲ್ಲವೂ ಅವನ ಆಜ್ಞೆಗೆ ಅಧೀನವಾಗಿವೆ. ತಿಳಿಯಿರಿ! ಸೃಷ್ಟಿ ಮತ್ತು ಆಜ್ಞೆ ಅವನದ್ದು. ಸರ್ವಲೋಕಗಳ ಪರಿಪಾಲಕ (ರಬ್ಬ್) ನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ." [ಅಲ್-ಅಅ್‌ರಾಫ್: 54].
ರಬ್ಬ್ (ಒಡೆಯ) ಎಂದರೆ ಆರಾಧ್ಯ (ಆರಾಧನೆಗೆ ಅರ್ಹನಾದವನು) ಎಂದರ್ಥ. "ಓ ಮನುಷ್ಯರೇ! ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ. (ಅವನು ಯಾರೆಂದರೆ) ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಛಾವಣಿಯನ್ನಾಗಿ ಮಾಡಿಕೊಟ್ಟವನು. ಆಕಾಶದಿಂದ ಮಳೆಯನ್ನು ಸುರಿಸಿ, ಅದರಿಂದ ನಿಮ್ಮ ಆಹಾರಕ್ಕಾಗಿ ಹಣ್ಣು-ಹಂಪಲುಗಳನ್ನು ಉತ್ಪಾದಿಸಿಕೊಟ್ಟವನು. ಆದ್ದರಿಂದ, ಇವೆಲ್ಲವನ್ನೂ ತಿಳಿದೂ ಸಹ ನೀವು ಅಲ್ಲಾಹನಿಗೆ ಸರಿಸಾಟಿಗಳನ್ನು ನಿಶ್ಚಯಿಸಬೇಡಿ." [ಅಲ್-ಬಕರ: 21-22].
ಇಬ್ನ್ ಕಸೀರ್ (ರಹಿಮಹುಲ್ಲಾ) ಹೇಳಿದ್ದಾರೆ: "ಈ ವಸ್ತುಗಳ ಸೃಷ್ಟಿಕರ್ತನು ಮಾತ್ರವೇ ಆರಾಧನೆಗೆ ಅರ್ಹನಾಗಿದ್ದಾನೆ."
ಅಲ್ಲಾಹು ಆಜ್ಞಾಪಿಸಿರುವ ಆರಾಧನೆಯ ವಿಧಗಳಾದ ಇಸ್ಲಾಮ್, ಈಮಾನ್, ಮತ್ತು ಇಹ್ಸಾನ್, ಮತ್ತು ಅವುಗಳ ಪೈಕಿ ಸೇರುವ ದುಆ (ಪ್ರಾರ್ಥನೆ), ಖೌಫ್ (ಭಯ), ರಜಾಅ್ (ನಿರೀಕ್ಷೆ), ತವಕ್ಕುಲ್ (ಭರವಸೆ), ರಗ್ಬ (ಆಶೆ), ರಹ್ಬ (ಭೀತಿ), ಖುಶೂಅ್ (ವಿನಮ್ರತೆ), ಖಶ್ಯ (ಭಯಭಕ್ತಿ), ಇನಾಬ (ಪಶ್ಚಾತ್ತಾಪದೊಂದಿಗೆ ಮರಳುವುದು), ಇಸ್ತಿಆನ (ಸಹಾಯ ಯಾಚಿಸುವುದು), ಇಸ್ತಿಆದ (ರಕ್ಷಣೆ/ಆಶ್ರಯ ಬೇಡುವುದು), ಇಸ್ತಿಗಾಸ (ವಿಪತ್ತಿನಲ್ಲಿ ರಕ್ಷಣೆ ಬೇಡುವುದು), ದಬ್ಹ್ (ಬಲಿ ಅರ್ಪಿಸುವುದು), ಮತ್ತು ನದ್ರ್ (ಹರಕೆ ಹೊರುವುದು) - ಹಾಗೂ ಅಲ್ಲಾಹು ಆಜ್ಞಾಪಿಸಿರುವ ಇಂತಹ ಇತರ ಆರಾಧನೆಯ ಪ್ರಕಾರಗಳೆಲ್ಲವೂ ಕೇವಲ ಅಲ್ಲಾಹನಿಗೆ ಮಾತ್ರ ಸಲ್ಲಬೇಕು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ಮಸೀದಿಗಳು (ಆರಾಧನಾ ಸ್ಥಳಗಳು) ಅಲ್ಲಾಹನಿಗೆ ಸೇರಿವೆ; ಆದ್ದರಿಂದ ಅಲ್ಲಾಹನೊಂದಿಗೆ ಬೇರೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ." [ಅಲ್-ಜಿನ್ನ್: 18]
ಯಾರು ಇವುಗಳಲ್ಲಿ ಯಾವುದನ್ನಾದರೂ ಅಲ್ಲಾಹನಲ್ಲದವರಿಗೆ ಅರ್ಪಿಸುತ್ತಾನೋ, ಅವನು ಮುಶ್ರಿಕ್ (ಬಹುದೇವಾರಾಧಕ) ಮತ್ತು ಕಾಫಿರ್ (ಸತ್ಯನಿಷೇಧಿ) ಆಗಿದ್ದಾನೆ. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಯಾರು ಅಲ್ಲಾಹನ ಜೊತೆಗೆ ಬೇರೆ ದೇವರನ್ನು ಕರೆದು ಪ್ರಾರ್ಥಿಸುತ್ತಾನೋ—ಹಾಗೆ ಪ್ರಾರ್ಥಿಸಲು ಅವನ ಬಳಿ ಯಾವುದೇ ಪುರಾವೆಯಿಲ್ಲ—ಅವನ ವಿಚಾರಣೆಯು ಅವನ ಪರಿಪಾಲಕನ (ರಬ್ಬ್) ಬಳಿಯಲ್ಲಿದೆ. ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಶಸ್ಸು ಗಳಿಸುವುದಿಲ್ಲ." [ಅಲ್-ಮುಅ್‌ಮಿನೂನ್: 117].
ಹದೀಸ್‌ನಲ್ಲಿ ಹೀಗಿದೆ: "ಪ್ರಾರ್ಥನೆ ಆರಾಧನೆಯ ತಿರುಳಾಗಿದೆ."
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದನು: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವವರು ಯಾರೋ ಅವರು ಸದ್ಯವೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು." [ಗಾಫಿರ್: 60].
ಖೌಫ್ (ಭಯ) ಕ್ಕೆ ಆಧಾರ ಅಲ್ಲಾಹನ ಈ ವಚನ: "ಆದ್ದರಿಂದ ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ." [ಆಲು ಇಮ್ರಾನ್: 175].
ರಜಾಅ್ (ಆಶಾಭಾವನೆ/ನಿರೀಕ್ಷೆ) ಗೆ ಆಧಾರ ಅಲ್ಲಾಹನ ಈ ವಚನ: "ಆದ್ದರಿಂದ ಯಾರು ತನ್ನ ಪರಿಪಾಲಕನ (ಅಲ್ಲಾಹನ) ಭೇಟಿಯನ್ನು ನಿರೀಕ್ಷಿಸುತ್ತಾನೋ ಅವನು ಸತ್ಕರ್ಮಗಳನ್ನು ಮಾಡಲಿ ಮತ್ತು ತನ್ನ ಪರಿಪಾಲಕನ (ಅಲ್ಲಾಹನ) ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯಾಗಿ ಮಾಡದಿರಲಿ." [ಅಲ್-ಕಹ್ಫ್: 110]
ತವಕ್ಕುಲ್ (ಭರವಸೆ/ಅವಲಂಬನೆ) ಗೆ ಆಧಾರ ಅಲ್ಲಾಹನ ಈ ವಚನ: "ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿಯೇ ಭರವಸೆಯಿಡಿರಿ." [ಅಲ್-ಮಾಇದ: 23]، ಮತ್ತು ಅಲ್ಲಾಹನ ಈ ವಚನ: "ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾನೋ ಅವನಿಗೆ ಅಲ್ಲಾಹನೇ ಸಾಕು." [ಅತ್ತಲಾಖ್: 3]
ರಗ್ಬ (ಆಶೆ), ರಹ್ಬ (ಭೀತಿ) ಮತ್ತು ಖುಶೂಅ್ (ವಿನಮ್ರತೆ) ಗೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ಅವರು (ಈ ಎಲ್ಲಾ ಪ್ರವಾದಿಗಳು) ಸತ್ಕರ್ಮಗಳನ್ನು ಮಾಡಲು ಧಾವಿಸುತ್ತಿದ್ದರು ಮತ್ತು ಆಶೆ ಹಾಗೂ ಭೀತಿಯಿಂದ ನಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದರು. ಅವರು ನಮಗೆ ವಿನಮ್ರರಾಗಿದ್ದರು." [ಅಲ್-ಅಂಬಿಯಾ: 90]
ಖಶ್ಯ (ಭಯಭಕ್ತಿ) ಗೆ ಆಧಾರ ಅಲ್ಲಾಹನ ಈ ವಚನ: "ಆದ್ದರಿಂದ ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ." [ಅಲ್-ಮಾಇದ: 3]
ಇನಾಬ (ಪಶ್ಚಾತ್ತಾಪದೊಂದಿಗೆ ಮರಳುವುದು) ಕ್ಕೆ ಆಧಾರ ಅಲ್ಲಾಹನ ಈ ವಚನ: "ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ವಿನಮ್ರತೆಯಿಂದ ಮರಳಿರಿ ಮತ್ತು ಅವನಿಗೆ ಶರಣಾಗಿರಿ..." [ಅಝ್ಝುಮರ್: 54].
ಇಸ್ತಿಆನ (ಸಹಾಯ ಯಾಚಿಸುವುದು) ಕ್ಕೆ ಆಧಾರ ಅಲ್ಲಾಹನ ಈ ವಚನ: "ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ; ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ." [ಅಲ್-ಫಾತಿಹಾ: 5] ಹದೀಸ್‌ನಲ್ಲಿ ಹೀಗಿದೆ: "ನೀನು ಸಹಾಯ ಬೇಡುವುದಾದರೆ, ಅಲ್ಲಾಹನಲ್ಲಿಯೇ ಸಹಾಯ ಬೇಡು."
ಇಸ್ತಿಆದ (ರಕ್ಷಣೆ/ಆಶ್ರಯ ಬೇಡುವುದು) ಕ್ಕೆ ಆಧಾರ ಅಲ್ಲಾಹನ ಈ ವಚನ: "ಹೇಳಿರಿ: ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ರಕ್ಷಣೆಯನ್ನು ಬೇಡುತ್ತೇನೆ." [ಅಲ್-ಫಲಕ್: 1] ಮತ್ತು "ಹೇಳಿರಿ: ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ರಕ್ಷಣೆಯನ್ನು ಬೇಡುತ್ತೇನೆ." [ಅನ್ನಾಸ್: 1].
ಇಸ್ತಿಗಾಸ (ವಿಪತ್ತಿನಲ್ಲಿ ಸಹಾಯ ಬೇಡುವುದು) ಕ್ಕೆ ಆಧಾರ ಅಲ್ಲಾಹನ ಈ ವಚನ: "ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಸಹಾಯ ಬೇಡುತ್ತಿದ್ದ ಸಂದರ್ಭ(ವನ್ನು ಸ್ಮರಿಸಿ). ಆಗ ಅವನು ನಿಮಗೆ ಉತ್ತರವಿತ್ತನು..." [ಅಲ್-ಅನ್ಫಾಲ್: 9].
ದಬ್ಹ್ (ಬಲಿ ಅರ್ಪಿಸುವುದು) ಕ್ಕೆ ಆಧಾರ ಅಲ್ಲಾಹನ ಈ ವಚನ: "ಹೇಳಿರಿ: ನಿಶ್ಚಯವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ಅವನಿಗೆ ಯಾವುದೇ ಸಹಭಾಗಿಗಳಿಲ್ಲ..." [ಅಲ್ ಅನ್ಆಮ್: 162-163]. ಸುನ್ನತ್ (ಹದೀಸ್) ನಿಂದ ಆಧಾರವೇನೆಂದರೆ: "ಅಲ್ಲಾಹೇತರರಿಗೆ ಬಲಿ ಅರ್ಪಿಸುವವನ ಮೇಲೆ ಅಲ್ಲಾಹನ ಶಾಪವಿದೆ."
ನದ್ರ್ (ಹರಕೆ ಹೊರುವುದು) ಗೆ ಆಧಾರ ಅಲ್ಲಾಹನ ಈ ವಚನ: "ಅವರು ತಮ್ಮ ಹರಕೆಗಳನ್ನು ಪೂರೈಸುತ್ತಾರೆ ಮತ್ತು ಕೆಡುಕು ವ್ಯಾಪಕವಾಗಿರುವ ದಿನವನ್ನು ಭಯಪಡುತ್ತಾರೆ." [ಅಲ್-ಇನ್ಸಾನ್: 7].
[ಎರಡನೇ ಮೂಲತತ್ವ]
ಇಸ್ಲಾಮ್ ಧರ್ಮವನ್ನು ಆಧಾರಗಳ (ಪುರಾವೆಗಳ) ಮೂಲಕ ಅರಿಯುವುದು. ಅಂದರೆ, ತೌಹೀದ್‌ನ (ಏಕದೇವತ್ವದ) ಮೂಲಕ ಅಲ್ಲಾಹನಿಗೆ ಸಂಪೂರ್ಣ ಶರಣಾಗುವುದು, ವಿಧೇಯತೆಯ ಮೂಲಕ ಅವನಿಗೆ ತಲೆಬಾಗುವುದು, ಮತ್ತು ಶಿರ್ಕ್ (ಬಹುದೇವಾರಾಧನೆ) ಹಾಗೂ ಅದರ ಅನುಯಾಯಿಗಳಿಂದ ದೂರವಿರುವುದು.
ಅದು ಮೂರು ಹಂತಗಳನ್ನು ಹೊಂದಿದೆ: ಇಸ್ಲಾಮ್, ಈಮಾನ್ ಮತ್ತು ಇಹ್ಸಾನ್.
ಪ್ರತಿಯೊಂದು ಹಂತಕ್ಕೂ ಅದರದ್ದೇ ಆದ ಸ್ತಂಭಗಳಿವೆ.
ಇಸ್ಲಾಮಿನ ಸ್ತಂಭಗಳು ಐದು: ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲವೆಂದು ಮತ್ತು ಮುಹಮ್ಮದ್ ﷺ ರವರು ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷಿ ನುಡಿಯುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಮತ್ತು ಅಲ್ಲಾಹನ ಪವಿತ್ರ ಗೃಹಕ್ಕೆ (ಕಅಬಾಗೆ) ತೆರಳಿ ಹಜ್ಜ್ ಮಾಡುವುದು.
ಸಾಕ್ಷ್ಯಕ್ಕೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ಅವನ (ಅಲ್ಲಾಹನ) ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲವೆಂದು ಸ್ವತಃ ಅಲ್ಲಾಹನೇ ಸಾಕ್ಷಿ ವಹಿಸಿದ್ದಾನೆ, ಮತ್ತು ಮಲಕ್‌ಗಳು (ದೇವದೂತರು) ಹಾಗೂ ಜ್ಞಾನವುಳ್ಳವರೂ (ಇದಕ್ಕೆ ಸಾಕ್ಷಿ ವಹಿಸಿದ್ದಾರೆ). ಅವನು ಸ್ಥಿರವಾಗಿ ನ್ಯಾಯವನ್ನು ಪಾಲಿಸುವವನು. ಅವನ (ಅಲ್ಲಾಹನ) ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ." [ಆಲ್-ಇಮ್ರಾನ್: 18].
ಲಾ ಇಲಾಹ ಇಲ್ಲಲ್ಲಾಹ್ ಎಂದರೆ ಅಲ್ಲಾಹನ ಹೊರತು ಬೇರೆ ಯಾವುದೇ ಸತ್ಯ ಆರಾಧ್ಯನಿಲ್ಲ ಎಂದರ್ಥ.
"ಲಾ ಇಲಾಹ (ಯಾವುದೇ ಆರಾಧ್ಯನಿಲ್ಲ)": ಇದು ಅಲ್ಲಾಹನಲ್ಲದೆ ಆರಾಧಿಸಲ್ಪಡುವ ಎಲ್ಲವನ್ನೂ ನಿರಾಕರಿಸುತ್ತದೆ.
"ಇಲ್ಲಲ್ಲಾಹ್ (ಅಲ್ಲಾಹನ ಹೊರತು)": ಇದು ಆರಾಧನೆಯನ್ನು ಕೇವಲ ಅಲ್ಲಾಹನಿಗೆ ಮಾತ್ರ ಮೀಸಲಿಟ್ಟು ದೃಢಪಡಿಸುತ್ತದೆ.
ಅವನ ಸಾಮ್ರಾಜ್ಯದಲ್ಲಿ (ಆಡಳಿತದಲ್ಲಿ) ಅವನಿಗೆ ಯಾವುದೇ ಸಹಭಾಗಿಗಳಿಲ್ಲದಿರುವಂತೆಯೇ ಅವನ ಆರಾಧನೆಯಲ್ಲೂ ಅವನಿಗೆ ಯಾವುದೇ ಸಹಭಾಗಿಗಳಿಲ್ಲ,
ಅದನ್ನು ಸ್ಪಷ್ಟಪಡಿಸುವ ಅದರ ವಿವರಣೆಯು ಅಲ್ಲಾಹನ ಈ ವಚನದಲ್ಲಿದೆ: "ಮತ್ತು ಇಬ್ರಾಹೀಂ ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನಾಂಗದವರೊಂದಿಗೆ ಹೇಳಿದ ಸಂದರ್ಭ: ಖಂಡಿತವಾಗಿಯೂ ನೀವು ಆರಾಧಿಸುತ್ತಿರುವವುಗಳಿಂದ ನಾನು ಸಂಪೂರ್ಣವಾಗಿ ಮುಕ್ತನಾಗಿದ್ದೇನೆ. ನನ್ನನ್ನು ಸೃಷ್ಟಿಸಿದವನನ್ನು (ಅಲ್ಲಾಹನನ್ನು) ಹೊರತು..." [ಅಝ್ಝುಖ್ರುಫ್: 26-27] ಮತ್ತು ಅಲ್ಲಾಹನ ಈ ವಚನದಲ್ಲಿದೆ: "ಹೇಳಿರಿ: ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ವಚನದ ಕಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು (ಇನ್ನಾರನ್ನೂ) ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ನಮ್ಮಲ್ಲಿ ಒಬ್ಬರು ಇನ್ನೊಬ್ಬರನ್ನು ಅಲ್ಲಾಹನ ಹೊರತಾಗಿರುವ ಪರಿಪಾಲಕರನ್ನಾಗಿ ಮಾಡದಿರೋಣ. ಅದರ ಬಳಿಕವೂ ಅವರು ವಿಮುಖರಾದರೆ (ಅವರೊಡನೆ) ಹೇಳಿರಿ: ನಾವು ಮುಸ್ಲಿಮರಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಗಳಾಗಿರಿ.” [ಆಲ್ ಇಮ್ರಾನ್: 64].
ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯಕ್ಕೆ ಆಧಾರ ಅಲ್ಲಾಹನ ಈ ವಚನ: "ನಿಮ್ಮ ಬಳಿಗೆ ನಿಮ್ಮಿಂದಲೇ ಇರುವ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟ ಅನುಭವಿಸುವುದು ಅವರಿಗೆ ಸಂಕಟದಾಯಕವಾಗಿದೆ. ಅವರಿಗೆ ನಿಮ್ಮ ಬಗ್ಗೆ ಕಳಕಳಿಯಿದೆ. ಅವರು ಸತ್ಯವಿಶ್ವಾಸಿಗಳೊಡನೆ ಕೃಪೆ ಮತ್ತು ದಯೆಯುಳ್ಳವರಾಗಿದ್ದಾರೆ." [ಅತ್ತೌಬಾ: 128]
ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯದ ಅರ್ಥವೇನೆಂದರೆ: ಅವರು ಆಜ್ಞಾಪಿಸಿದ ವಿಷಯಗಳಲ್ಲಿ ಅವರಿಗೆ ವಿಧೇಯರಾಗುವುದು, ಅವರು ತಿಳಿಸಿದ ವಿಷಯಗಳನ್ನು ಸತ್ಯವೆಂದು ನಂಬುವುದು, ಅವರು ನಿಷೇಧಿಸಿದ ಮತ್ತು ತಡೆದ ವಿಷಯಗಳಿಂದ ದೂರವಿರುವುದು, ಮತ್ತು ಅವರು ತಂದಿರುವ ಶರೀಅತ್‌ನ ಮೂಲಕವೇ ಹೊರತು ಬೇರೆ ರೀತಿಯಲ್ಲಿ ಅಲ್ಲಾಹನನ್ನು ಆರಾಧಿಸದಿರುವುದು.
ನಮಾಝ್, ಝಕಾತ್ ಮತ್ತು ತೌಹೀದ್‌ನ (ಏಕದೇವತ್ವದ) ವಿವರಣೆಗೆ ಆಧಾರವು ಅಲ್ಲಾಹನ ಈ ವಚನ: "ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕವಾಗಿಸಿ ಏಕನಿಷ್ಠರಾಗಿ ಅವನನ್ನು ಮಾತ್ರ ಆರಾಧಿಸಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ ಎಂದಲ್ಲದೆ ಬೇರೇನನ್ನೂ ಅವರಿಗೆ ಆದೇಶಿಸಲಾಗಿರಲಿಲ್ಲ. ಅದೇ ನೇರವಾದ ಧರ್ಮ." [ಅಲ್-ಬಯ್ಯಿನ: 5].
ಉಪವಾಸಕ್ಕೆ ಆಧಾರ ಅಲ್ಲಾಹನ ಈ ವಚನ: "ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರಿಗೆ ಕಡ್ಡಾಯಗೊಳಿಸಲಾದಂತೆ ನಿಮಗೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ." [ಅಲ್-ಬಖರ:183].
ಹಜ್‌ಗೆ ಆಧಾರ ಅಲ್ಲಾಹನ ಈ ವಚನ: "ಆ ಭವನಕ್ಕೆ ತಲುಪಲು ಸಾಧ್ಯವಿರುವ ಜನರು ಅಲ್ಲಿಗೆ ತೆರಳಿ ಹಜ್ಜ್ ನಿರ್ವಹಿಸುವುದನ್ನು ಅಲ್ಲಾಹು ಕಡ್ಡಾಯಗೊಳಿಸಿದ್ದಾನೆ. ಆದರೆ ಯಾರಾದರೂ ಅದನ್ನು ನಿಷೇಧಿಸಿದರೆ—ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕದವರಿಂದ ಸಂಪೂರ್ಣ ನಿರಪೇಕ್ಷನಾಗಿದ್ದಾನೆ." [ಆಲ್ ಇಮ್ರಾನ್:97].
ಎರಡನೇ ಹಂತ: ಈಮಾನ್. ಅದು ಎಪ್ಪತ್ತಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅವುಗಳಲ್ಲಿ ಅತ್ಯುನ್ನತ ಶಾಖೆಯು ಲಾ ಇಲಾಹ ಇಲ್ಲಲ್ಲಾಹ್ ಎಂಬ ವಚನ, ಅತ್ಯಂತ ಕೆಳಗಿನ ಶಾಖೆಯು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು. ಲಜ್ಜೆಯು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ.
ಅದರ ಸ್ತಂಭಗಳು ಆರು: ಅಲ್ಲಾಹನಲ್ಲಿ ವಿಶ್ವಾಸವಿಡುವುದು, ಅವನ ಮಲಕ್‌ಗಳಲ್ಲಿ (ದೇವದೂತರುಗಳಲ್ಲಿ) ವಿಶ್ವಾಸವಿಡುವುದು, ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು, ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು, ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು, ಮತ್ತು ವಿಧಿಯ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು.
ಈ ಆರು ಸ್ತಂಭಗಳಿಗೆ ಆಧಾರ ಅಲ್ಲಾಹನ ಈ ವಚನ: "ಪುಣ್ಯ ಎಂದರೆ ನೀವು ನಿಮ್ಮ ಮುಖಗಳನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿಸುವುದಲ್ಲ. ಬದಲಿಗೆ, ಪುಣ್ಯವೆಂದರೆ ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ದೇವದೂತರುಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುವುದು..." [ಅಲ್-ಬಖರ:177].
ವಿಧಿ ವಿಶ್ವಾಸದ ಆಧಾರ ಅಲ್ಲಾಹನ ಈ ವಚನ: "ನಿಶ್ಚಯವಾಗಿಯೂ ನಾವು ಎಲ್ಲಾ ವಸ್ತುಗಳನ್ನು ಒಂದು (ನಿಶ್ಚಿತ) ನಿರ್ಣಯದಂತೆ ಸೃಷ್ಟಿಸಿದ್ದೇವೆ." [ಅಲ್-ಕಮರ್:49]
ಮೂರನೇ ಹಂತ: ಇಹ್ಸಾನ್. ಇದಕ್ಕಿರುವುದು ಒಂದೇ ಸ್ತಂಭ. ಅದೆಂದರೆ, ನೀವು ಅಲ್ಲಾಹನನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂಬ ಪ್ರಜ್ಞೆಯನ್ನು ಹೊಂದಿರುವುದು.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಮತ್ತು ಇಹ್ಸಾನ್ ಇರುವವರೊಡನೆ ಇದ್ದಾನೆ." [ಅನ್ನಹ್ಲ್:128]
ಮತ್ತು ಅಲ್ಲಾಹನ ಈ ವಚನ: "ಪ್ರಬಲನು ಮತ್ತು ದಯೆ ತೋರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ. ಅವನು ಯಾರೆಂದರೆ, ನೀವು ನಿಲ್ಲುವಾಗ ನಿಮ್ಮನ್ನು ನೋಡುವವನು. ಸಾಷ್ಟಾಂಗ ಮಾಡುವವರ ಜೊತೆಗಿನ ತಮ್ಮ ಚಲನವಲನಗಳನ್ನೂ ಕೂಡ." [ಅಶ್ಶುಅರಾ: 217-219].
ಮತ್ತು ಅಲ್ಲಾಹನ ಈ ವಚನ: "ನೀವು ಯಾವುದೇ ಕೆಲಸದಲ್ಲಿ ನಿರತರಾಗಿದ್ದರೂ, ನೀವು ಕುರ್‌ಆನಿನ ಯಾವುದೇ ಭಾಗವನ್ನು ಪಠಿಸುತ್ತಿದ್ದರೂ, ಮತ್ತು ನೀವು (ಜನರು) ಯಾವುದೇ ಕೆಲಸವನ್ನು ಮಾಡುತ್ತಿದ್ದರೂ, ನೀವು ಅದರಲ್ಲಿ ಮುಳುಗಿರುವಾಗ ನಾವು ನಿಮ್ಮ ಮೇಲೆ ಸಂಪೂರ್ಣ ಸಾಕ್ಷಿಯಾಗಿರುತ್ತೇವೆ..." [ಯೂನುಸ್: 61] ಎಂಬ ಸೂಕ್ತಿ.
ಸುನ್ನತ್ತಿನಿಂದ ಆಧಾರವೆಂದರೆ: ಪ್ರಸಿದ್ಧ ಹದೀಸ್ ಜಿಬ್ರೀಲ್. ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ ﷺ ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿಯವರ ﷺ ಬಳಿ ಬಂದು, ತಮ್ಮ ಮೊಣಕಾಲನ್ನು ಪ್ರವಾದಿಯವರ ﷺ ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: "ಓ ಮುಹಮ್ಮದ್!
ನನಗೆ ಇಸ್ಲಾಮಿನ ಬಗ್ಗೆ ತಿಳಿಸಿರಿ."
ಆಗ ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ಇಸ್ಲಾಮ್ ಎಂದರೆ: ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕನ್ನು ಹೊಂದಿದವರಾಗಿ ಅನ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಸಾಕ್ಷಿ ವಹಿಸುವುದು, ನಮಾಝನ್ನು ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ತಲುಪಲು ಸಾಧ್ಯವಾದರೆ ಅಲ್ಲಾಹನ ಭವನಕ್ಕೆ ಹಜ್ಜ್ ನಿರ್ವಹಿಸುವುದು." ಆ ವ್ಯಕ್ತಿ ಹೇಳಿದರು: “ತಾವು ಹೇಳಿದ್ದು ಸತ್ಯ”. ಆ ವ್ಯಕ್ತಿ ಪ್ರಶ್ನಿಸುವುದು ಮತ್ತು ಸತ್ಯವೆಂದು ದೃಢೀಕರಿಸುವುದು ನಮಗೆ ತುಂಬಾ ಅಚ್ಚರಿಯನ್ನುಂಟು ಮಾಡಿತು.
ಅವರು ಕೇಳಿದರು: "ನನಗೆ ಈಮಾನಿನ ಬಗ್ಗೆ ತಿಳಿಸಿಕೊಡಿ."
ಅವರು (ಪ್ರವಾದಿಯವರು) ಉತ್ತರಿಸಿದರು: “ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಪ್ರವಾದಿಗಳಲ್ಲಿ, ಅಂತ್ಯ ದಿನದಲ್ಲಿ ಮತ್ತು ವಿಧಿಯಲ್ಲಿ – ಅದರ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು.” ಆಗ ಅವರು, “ನೀವು ಸತ್ಯವನ್ನೇ ನುಡಿದಿರಿ” ಎಂದರು.
ಅವರು ಹೇಳಿದರು: "ನನಗೆ ಇಹ್ಸಾನ್ ಬಗ್ಗೆ ತಿಳಿಸಿಕೊಡಿ."
ಅವರು (ಪ್ರವಾದಿಯವರು) ಹೇಳಿದರು: "ನೀವು ಅಲ್ಲಾಹನನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂದು ಭಾವಿಸಿ ಆರಾಧಿಸುವುದು."
ಆ ವ್ಯಕ್ತಿ ಹೇಳಿದರು: "ನನಗೆ ಪ್ರಳಯದ ಕುರಿತು ತಿಳಿಸಿಕೊಡಿ."
ಅವರು (ಪ್ರವಾದಿಯವರು) ಹೇಳಿದರು: "ಅದರ ಬಗ್ಗೆ ಪ್ರಶ್ನಿಸಲ್ಪಟ್ಟವನು ಪ್ರಶ್ನಿಸುವವನಿಗಿಂತ ಹೆಚ್ಚು ತಿಳಿದವನಲ್ಲ."
ಅವರು ಕೇಳಿದರು: "ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ."
ಅವರು (ಪ್ರವಾದಿಯವರು) ಉತ್ತರಿಸಿದರು: "ದಾಸಿಯು ತನ್ನ ಯಜಮಾನಿಗೆ ಜನ್ಮ ನೀಡುವುದು, ಹಾಗೂ ಬರಿಗಾಲಿನ, ಬತ್ತಲೆಯ ಮತ್ತು ಬಡವರಾದ ಕುರಿಗಾಹಿಗಳು ಎತ್ತರದ ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಪರಸ್ಪರ ಸ್ಪರ್ಧಿಸುವುದು."
ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಸ್ವಲ್ಪ ಹೊತ್ತು ಅಲ್ಲೇ ಇದ್ದೆ. ನಂತರ ಅವರು ನನ್ನಲ್ಲಿ ಕೇಳಿದರು: "ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಅವರು ಹೇಳಿದರು: "ಅವರು ಜಿಬ್ರೀಲ್. ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಅವರು ನಿಮ್ಮ ಬಳಿಗೆ ಬಂದಿದ್ದರು."
[ಮೂರನೇ ಮೂಲಭೂತ ತತ್ವ]
ನಿಮ್ಮ ಪ್ರವಾದಿ ಮುಹಮ್ಮದ್ ﷺ ರವರನ್ನು ಅರಿಯುವುದು. ಅವರು ಮುಹಮ್ಮದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್. ಹಾಶಿಮ್ ಖುರೈಶ್ ಸಂತತಿಗೆ ಸೇರಿದವರು, ಮತ್ತು ಖುರೈಷರು ಅರಬ್ಬರಿಗೆ ಸೇರಿದವರು, ಹಾಗೂ ಅರಬ್ಬರು ಇಸ್ಮಾಯೀಲ್ ಬಿನ್ ಇಬ್ರಾಹೀಂ ಅಲ್-ಖಲೀಲ್ — ಅವರ ಮೇಲೂ ಮತ್ತು ನಮ್ಮ ಪ್ರವಾದಿಯವರ ಮೇಲೂ ಅತ್ಯುತ್ತಮವಾದ ಸಲಾತ್ (ಕೃಪೆ) ಮತ್ತು ಸಲಾಮ್ (ಶಾಂತಿ) ಇರಲಿ — ರವರ ಸಂತತಿಗೆ ಸೇರಿದವರು.
ಅವರ ಒಟ್ಟು ವಯಸ್ಸು ಅರವತ್ತಮೂರು ವರ್ಷಗಳು - ಅದರಲ್ಲಿ ನಲವತ್ತು ವರ್ಷಗಳು ಪ್ರವಾದಿತ್ವಕ್ಕಿಂತ ಮೊದಲು ಕಳೆದವು, ಮತ್ತು ಇಪ್ಪತ್ತಮೂರು ವರ್ಷಗಳು ಪ್ರವಾದಿ ಹಾಗೂ ಸಂದೇಶವಾಹಕರಾಗಿ ಕಳೆದವು.
ಅವರನ್ನು 'ಇಖ್ರಅ್' (ಓದು) ಎಂಬ ವಚನದೊಂದಿಗೆ ಪ್ರವಾದಿಯನ್ನಾಗಿ ಮಾಡಲಾಯಿತು, ಮತ್ತು 'ಅಲ್-ಮುದ್ದಸ್ಸಿರ್' ನೊಂದಿಗೆ ಸಂದೇಶವಾಹಕರನ್ನಾಗಿ ಕಳುಹಿಸಲಾಯಿತು. ಅವರ ಊರು ಮಕ್ಕಾ.
ಅಲ್ಲಾಹು ಅವರನ್ನು ಶಿರ್ಕ್‌ನ ಬಗ್ಗೆ ಎಚ್ಚರಿಸಲು ಮತ್ತು ತೌಹೀದ್‌ನ ಕಡೆಗೆ ಆಹ್ವಾನಿಸಲು ಕಳುಹಿಸಿದನು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಓ ಹೊದಿಕೆಯನ್ನು ಹೊದ್ದುಕೊಂಡವರೇ! ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ. ಮತ್ತು ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ. ಮತ್ತು ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ. ಮತ್ತು ವಿಗ್ರಹಗಳಿಂದ ದೂರವಿರಿ. ಮತ್ತು ಹೆಚ್ಚಿನದನ್ನು ಪಡೆಯುವ ಉದ್ದೇಶದಿಂದ ಉಪಕಾರ ಮಾಡಬೇಡಿರಿ. ಮತ್ತು ನಿಮ್ಮ ಪರಿಪಾಲಕನಿಗಾಗಿ (ಅಲ್ಲಾಹನಿಗಾಗಿ) ತಾಳ್ಮೆಯನ್ನು ವಹಿಸಿರಿ." [ಅಲ್-ಮುದ್ದಸ್ಸಿರ್: 1- 7].
ಈ ವಚನಗಳ ಅರ್ಥವೇನೆಂದರೆ: "ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ." ಅಂದರೆ, ಶಿರ್ಕ್‌ನ ಕುರಿತು ಎಚ್ಚರಿಸುವುದು ಮತ್ತು ತೌಹೀದ್‌ನ ಕಡೆಗೆ ಆಹ್ವಾನಿಸುವುದು.
"ಮತ್ತು ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ." ಅಂದರೆ, ತೌಹೀದ್‌ನ ಮೂಲಕ ಅವನಿಗೆ (ಅಲ್ಲಾಹನಿಗೆ) ಮಹಿಮೆ ಸಲ್ಲಿಸಿರಿ.
"ಮತ್ತು ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ." ಅಂದರೆ, ಶಿರ್ಕ್‌ನ ಮಾಲಿನ್ಯದಿಂದ ನಿಮ್ಮ ಕರ್ಮಗಳನ್ನು ಪರಿಶುದ್ಧಗೊಳಿಸಿರಿ.
"ರುಜ್ಝ್‌ನಿಂದ ದೂರವಿರಿ." `ರುಜ್ಝ್` ಎಂದರೆ ವಿಗ್ರಹಗಳು. ಅವುಗಳಿಂದ ದೂರವಿರುವುದು ಎಂದರೆ ಅವುಗಳನ್ನು ತ್ಯಜಿಸುವುದು, ಹಾಗೂ ಅವುಗಳಿಂದ ಮತ್ತು ಅವುಗಳ ಆರಾಧಕರಿಂದ ದೂರವಿರುವುದು.
ಈ ರೀತಿ ತೌಹೀದ್‌ನ ಕಡೆಗೆ ಆಹ್ವಾನಿಸುತ್ತಾ ಅವರು ಹತ್ತು ವರ್ಷಗಳನ್ನು ಕಳೆದರು. ಹತ್ತು ವರ್ಷಗಳ ನಂತರ, ಅವರನ್ನು ಆಕಾಶದ ಕಡೆಗೆ ಕರೆದೊಯ್ಯಲಾಯಿತು ಮತ್ತು ಅವರಿಗೆ ಐದು ಹೊತ್ತಿನ ನಮಾಝ್‌ಗಳನ್ನು ಕಡ್ಡಾಯಗೊಳಿಸಲಾಯಿತು. ಅವರು ಮಕ್ಕಾದಲ್ಲಿ ಮೂರು ವರ್ಷಗಳ ಕಾಲ ನಮಾಝ್ ಮಾಡಿದರು. ತರುವಾಯ ಅವರಿಗೆ ಮದೀನಾಗೆ ಹಿಜ್ರತ್ (ವಲಸೆ) ಮಾಡಲು ಆಜ್ಞಾಪಿಸಲಾಯಿತು.
ಹಿಜ್ರತ್ (ವಲಸೆ) ಎಂದರೆ, ಶಿರ್ಕ್‌ನ ನಾಡಿನಿಂದ ಇಸ್ಲಾಮಿನ ನಾಡಿನ ಕಡೆಗೆ ಸ್ಥಳಾಂತರಗೊಳ್ಳುವುದು.
ಶಿರ್ಕ್‌ನ ನಾಡಿನಿಂದ ಇಸ್ಲಾಮಿನ ನಾಡಿನ ಕಡೆಗೆ ಹಿಜ್ರತ್ ಮಾಡುವುದು ಈ ಸಮುದಾಯದ ಮೇಲೆ ಕಡ್ಡಾಯವಾಗಿದೆ, ಮತ್ತು ಇದು ಅಂತ್ಯದಿನವು ಸಂಭವಿಸುವವರೆಗೂ ಅಸ್ತಿತ್ವದಲ್ಲಿರುತ್ತದೆ.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಯಾರು ತಮಗೆ ತಾವೇ ಅನ್ಯಾಯ ಮಾಡಿಕೊಳ್ಳುತ್ತಾರೋ ಅವರ ಪ್ರಾಣಗಳನ್ನು ವಶಪಡಿಸಿಕೊಳ್ಳುವಾಗ ಮಲಕ್‌ಗಳು (ದೇವದೂತರು) ಕೇಳುತ್ತಾರೆ: "ನೀವು ಯಾವ ಸ್ಥಿತಿಯಲ್ಲಿದ್ದಿರಿ?" ಅವರು ಹೇಳುತ್ತಾರೆ: "ನಾವು ಭೂಮಿಯಲ್ಲಿ ದುರ್ಬಲರಾಗಿದ್ದೆವು." (ಆಗ ಮಲಕ್‌ಗಳು) ಹೇಳುತ್ತಾರೆ: "ಅಲ್ಲಾಹನ ಭೂಮಿಯು ವಿಶಾಲವಾಗಿರಲಿಲ್ಲವೇ? ನೀವು ಅಲ್ಲಿ ವಲಸೆ (ಹಿಜ್ರತ್) ಹೋಗಬಹುದಿತ್ತಲ್ಲವೇ?" ಇಂತಹವರ ವಾಸಸ್ಥಾನವು ನರಕವಾಗಿದೆ, ಅದು ಎಷ್ಟೊಂದು ಕೆಟ್ಟ ತಾಣ! ಆದರೆ ದುರ್ಬಲರಾದ, ಯಾವುದೇ ಉಪಾಯವನ್ನು ಕಾಣದ ಮತ್ತು ಯಾವುದೇ ದಾರಿಯನ್ನೂ ಕಂಡುಕೊಳ್ಳಲಾಗದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇದರಿಂದ ಹೊರತಾಗಿದ್ದಾರೆ." [ಅನ್ನಿಸಾ: 97-98].
ಮತ್ತು ಅಲ್ಲಾಹನ ಈ ವಚನ: "ಓ ವಿಶ್ವಾಸವಿಟ್ಟ ನನ್ನ ದಾಸರೇ! ಖಂಡಿತವಾಗಿಯೂ ನನ್ನ ಭೂಮಿಯು ವಿಶಾಲವಾಗಿದೆ. ಆದ್ದರಿಂದ, ನೀವು ನನ್ನನ್ನು ಮಾತ್ರ ಆರಾಧಿಸಿರಿ." [ಅಲ್-ಅನ್ಕಬೂತ್: 56].
ಇಮಾಮ್ ಬಗವೀ (ರಹಿಮಹುಲ್ಲಾ) ಹೇಳುತ್ತಾರೆ: "ಈ ವಚನವು ಅವತೀರ್ಣವಾದದ್ದು ಮಕ್ಕಾದಲ್ಲಿದ್ದುಕೊಂಡು ಹಿಜ್ರತ್ ಮಾಡದ ಮುಸ್ಲಿಮರ ಬಗ್ಗೆ, ಅಲ್ಲಾಹು ಅವರನ್ನು ಸತ್ಯವಿಶ್ವಾಸಿಗಳೆಂದು ಕರೆದಿದ್ದಾನೆ."
ಹಿಜ್ರತ್‌ನ ಕುರಿತು ಸುನ್ನತ್ (ಹದೀಸ್) ನಲ್ಲಿರುವ ಆಧಾರ ಪ್ರವಾದಿಯವರ ಈ ವಚನ: "ಪಶ್ಚಾತ್ತಾಪದ (ತೌಬಾದ) ಬಾಗಿಲು ಮುಚ್ಚುವವರೆಗೆ ಹಿಜ್ರತ್ ಕೊನೆಗೊಳ್ಳುವುದಿಲ್ಲ, ಮತ್ತು ಸೂರ್ಯನು ಪಶ್ಚಿಮದಿಂದ ಉದಯಿಸುವವರೆಗೆ ಪಶ್ಚಾತ್ತಾಪದ ಬಾಗಿಲು ಮುಚ್ಚುವುದಿಲ್ಲ."
ಅವರು ಮದೀನಾದಲ್ಲಿ ನೆಲೆಸಿದ ನಂತರ, ಇಸ್ಲಾಮಿನ ಉಳಿದ ನಿಯಮಗಳನ್ನು (ಶರೀಅತ್‌ಗಳನ್ನು) ಅವರಿಗೆ ಆಜ್ಞಾಪಿಸಲಾಯಿತು - ಉದಾಹರಣೆಗೆ: ಝಕಾತ್, ಉಪವಾಸ, ಹಜ್, ಅದಾನ್, ಜಿಹಾದ್, ಸತ್ಕಾರ್ಯಗಳ ಕಡೆಗೆ ಆದೇಶಿಸುವುದು ಮತ್ತು ದುಷ್ಕೃತ್ಯಗಳಿಂದ ತಡೆಯುವುದು - ಈ ಕಾರ್ಯಗಳಲ್ಲಿ ಅವರು ಹತ್ತು ವರ್ಷಗಳನ್ನು ಕಳೆದರು.
ನಂತರ ಅವರು ﷺ ನಿಧನರಾದರು, ಆದರೆ ಅವರ ಧರ್ಮವು ಉಳಿದುಕೊಂಡಿದೆ. ಇದುವೇ ಅವರ ಧರ್ಮ; ಅವರು ಸಮುದಾಯಕ್ಕೆ ಮಾರ್ಗದರ್ಶನ ನೀಡದಂತಹ ಯಾವುದೇ ಒಳಿತು ಉಳಿದಿಲ್ಲ, ಮತ್ತು ಅವರು ಎಚ್ಚರಿಸದಂತಹ ಯಾವುದೇ ಕೆಡುಕು ಉಳಿದಿಲ್ಲ.
ಅವರು ಮಾರ್ಗದರ್ಶನ ನೀಡಿದ ಒಳಿತು ಯಾವುದೆಂದರೆ, ತೌಹೀದ್ (ಏಕದೇವತ್ವ) ಮತ್ತು ಅಲ್ಲಾಹು ಇಷ್ಟಪಡುವ ಹಾಗೂ ಮೆಚ್ಚುವ ಎಲ್ಲಾ ಸತ್ಕಾರ್ಯಗಳು.
ಅವರು ಎಚ್ಚರಿಸಿದ ಕೆಡುಕು ಎಂದರೆ, ಶಿರ್ಕ್ (ಬಹುದೇವಾರಾಧನೆ), ಮತ್ತು ಅಲ್ಲಾಹು ದ್ವೇಷಿಸುವ ಹಾಗೂ ತಿರಸ್ಕರಿಸುವ ಎಲ್ಲಾ ದುಷ್ಕಾರ್ಯಗಳು.
ಅಲ್ಲಾಹು ಅವರನ್ನು ಸಮಸ್ತ ಮಾನವರಿಗಾಗಿ ಕಳುಹಿಸಿದನು, ಮತ್ತು ಜಿನ್ನ್‌ಗಳು ಹಾಗೂ ಮಾನವರೆಂಬ ಉಭಯ ವರ್ಗದ ಮೇಲೂ ಅವರಿಗೆ ವಿಧೇಯರಾಗುವುದನ್ನು ಕಡ್ಡಾಯಗೊಳಿಸಿದನು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಹೇಳಿರಿ: ಓ ಮನುಷ್ಯರೇ! ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಬಳಿಗೆ (ಕಳುಹಿಸಲಾದ) ಅಲ್ಲಾಹನ ಸಂದೇಶವಾಹಕನಾಗಿದ್ದೇನೆ..." [ಅಲ್-ಅಅ್‌ರಾಫ್:158]
ಅಲ್ಲಾಹು ಅವರ ಮೂಲಕ ಧರ್ಮವನ್ನು ಪರಿಪೂರ್ಣಗೊಳಿಸಿದನು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ." [ಅಲ್-ಮಾಇದ: 3].
ಅವರು ಮರಣ ಹೊಂದಿದ್ದಾರೆ ಎಂಬುದಕ್ಕೆ ಆಧಾರ ಅಲ್ಲಾಹನ ಈ ವಚನ: "(ಓ ಪ್ರವಾದಿಯವರೇ!) ಖಂಡಿತವಾಗಿಯೂ ನೀವು ಮರಣವನ್ನಪ್ಪುವಿರಿ ಮತ್ತು ಖಂಡಿತವಾಗಿಯೂ ಅವರು ಕೂಡ ಮರಣವನ್ನಪ್ಪುವರು. ತರುವಾಯ ಪುನರುತ್ಥಾನದ ದಿನದಂದು ನೀವೆಲ್ಲರೂ ನಿಮ್ಮ ಪರಿಪಾಲಕನ (ಅಲ್ಲಾಹನ) ಸಮ್ಮುಖದಲ್ಲಿ ತರ್ಕಿಸುವಿರಿ." [ಅಝ್ಝುಮರ್: 30-31].
ಜನರು ಮರಣಹೊಂದಿದ ನಂತರ ಮರಳಿ ಎಬ್ಬಿಸಲ್ಪಡುವರು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ನಾವು ನಿಮ್ಮನ್ನು ಅದರಿಂದ (ಭೂಮಿಯಿಂದ) ಸೃಷ್ಟಿಸಿದೆವು, ನಿಮ್ಮನ್ನು ಅದಕ್ಕೇ ಮರಳಿಸುವೆವು ಮತ್ತು ಅದರಿಂದಲೇ ನಿಮ್ಮನ್ನು ಪುನಃ ಹೊರತರುವೆವು." [ತ್ವಾಹಾ: 55] ಮತ್ತು ಅಲ್ಲಾಹನ ಈ ವಚನ: "ಮತ್ತು ಅಲ್ಲಾಹನೇ ನಿಮ್ಮನ್ನು ಭೂಮಿಯಿಂದ (ಬೆಳೆಯಂತೆ) ಬೆಳೆಸಿದನು. ತರುವಾಯ ಅವನು ನಿಮ್ಮನ್ನು ಅದರೊಳಗೇ ಮರಳಿಸುವನು ಮತ್ತು ನಿಮ್ಮನ್ನು ಅದರಿಂದಲೇ (ಮತ್ತೆ) ಹೊರತೆಗೆಯುವನು." [ನೂಹ್: 17-18].
ಮರಳಿ ಎಬ್ಬಿಸಲ್ಪಟ್ಟ ನಂತರ ಅವರ ವಿಚಾರಣೆ ಮಾಡಲಾಗುವುದು ಮತ್ತು ಅವರ ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡಲಾಗುವುದು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ದುಷ್ಕರ್ಮಿಗಳಿಗೆ ಅವರು ಮಾಡಿದ ದುಷ್ಕರ್ಮದ ಪ್ರತಿಫಲವನ್ನು ನೀಡಲು ಮತ್ತು ಸತ್ಕರ್ಮಿಗಳಿಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು." [ಅನ್ನಜ್ಮ್: 31].
ಯಾರು ಮರಳಿ ಎಬ್ಬಿಸಲ್ಪಡುವುದನ್ನು (ಪುನರುತ್ಥಾನವನ್ನು) ನಿರಾಕರಿಸುತ್ತಾನೋ ಅವನು ಸತ್ಯನಿಷೇಧಿಯಾಗುತ್ತಾನೆ. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ತಾವು ಎಂದಿಗೂ ಮರಳಿ ಎಬ್ಬಿಸಲ್ಪಡುವುದಿಲ್ಲವೆಂದು ಸತ್ಯನಿಷೇಧಿಗಳು ಭ್ರಮಿಸಿದ್ದಾರೆ. ನೀವು ಹೇಳಿರಿ: "ಹಾಗಲ್ಲ! ನನ್ನ ಪರಿಪಾಲಕನ ಮೇಲಾಣೆ, ನೀವು ಖಂಡಿತವಾಗಿಯೂ ಮರಳಿ ಎಬ್ಬಿಸಲ್ಪಡುವಿರಿ! ತರುವಾಯ ನೀವು ಮಾಡಿದ ಕರ್ಮಗಳ ಕುರಿತು ನಿಮಗೆ ತಿಳಿಸಲಾಗುವುದು. ಇದು ಅಲ್ಲಾಹನಿಗೆ ಅತ್ಯಂತ ಸುಲಭವಾದ ಕಾರ್ಯವಾಗಿದೆ." [ಅತ್ತಗಾಬುನ್: 7].
ಅಲ್ಲಾಹು ಎಲ್ಲಾ ಸಂದೇಶವಾಹಕರನ್ನು ಶುಭವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಕಳುಹಿಸಿದನು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಸುವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರನ್ನು (ನಾವು ಕಳುಹಿಸಿದ್ದೇವೆ). ಏಕೆಂದರೆ, ಆ ಸಂದೇಶವಾಹಕರು ಬಂದ ನಂತರ ಜನರಿಗೆ ಅಲ್ಲಾಹನ ಮುಂದೆ ಮಂಡಿಸಲು ಯಾವುದೇ ಸಬೂಬು ಉಳಿಯಬಾರದೆಂದು..." [ಅನ್ನಿಸಾ: 165].
ಅವರಲ್ಲಿ ಮೊದಲಿಗರು ನೂಹ್ (ಅಲೈಹಿಸ್ಸಲಾಮ್).
ಅವರಲ್ಲಿ ಕೊನೆಯವರು ಮುಹಮ್ಮದ್ ﷺ. ಅವರು ಅಂತಿಮ ಪ್ರವಾದಿಯಾಗಿದ್ದು, ಅವರ ನಂತರ ಯಾವುದೇ ಪ್ರವಾದಿ ಇಲ್ಲ. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರಿಗೂ ತಂದೆಯಾಗಿಲ್ಲ; ಬದಲಾಗಿ ಅವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಮತ್ತು ಪ್ರವಾದಿಗಳ ಪೈಕಿ ಅಂತಿಮರಾಗಿದ್ದಾರೆ..." [ಅಲ್-ಅಹ್‌ಝಾಬ್: 40]
ಅವರಲ್ಲಿ ಮೊದಲಿಗರು ನೂಹ್ ಎಂಬುದಕ್ಕೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ನಾವು ನೂಹ್‌ಗೆ ಮತ್ತು ಅವರ ನಂತರ ಬಂದ ಪ್ರವಾದಿಗಳಿಗೆ ದಿವ್ಯವಾಣಿಯನ್ನು (ವಹಿ) ಕಳುಹಿಸಿದಂತೆಯೇ, ನಿಮಗೂ ದಿವ್ಯವಾಣಿಯನ್ನು ಕಳುಹಿಸಿದ್ದೇವೆ..." [ಅನ್ನಿಸಾ: 163]
ನೂಹ್‌ರಿಂದ ಹಿಡಿದು ಮುಹಮ್ಮದ್‌ರವರವರೆಗೆ, ಅಲ್ಲಾಹು ಪ್ರತಿಯೊಂದು ಸಮುದಾಯಕ್ಕೂ ಓರ್ವ ಸಂದೇಶವಾಹಕರನ್ನು ಕಳುಹಿಸಿದ್ದಾನೆ. ಅವರು ತಮ್ಮ ಜನರಿಗೆ ಕೇವಲ ಅಲ್ಲಾಹನನ್ನು ಮಾತ್ರ ಆರಾಧಿಸಲು ಆದೇಶಿಸುತ್ತಿದ್ದರು ಮತ್ತು ತ್ವಾಗೂತ್‌ನ (ಅಲ್ಲಾಹನನ್ನು ಹೊರತುಪಡಿಸಿ ಆರಾಧಿಸಲ್ಪಡುವ ಇತರರ) ಆರಾಧನೆಯಿಂದ ತಡೆಯುತ್ತಿದ್ದರು. ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯದಲ್ಲೂ "ನೀವು ಅಲ್ಲಾಹನನ್ನೇ ಆರಾಧಿಸಿರಿ ಮತ್ತು ತ್ವಾಗೂತ್‌ನಿಂದ ದೂರವಿರಿ" (ಎಂಬ ಸಂದೇಶವನ್ನು ನೀಡಿ) ಓರ್ವ ಸಂದೇಶವಾಹಕರನ್ನು ಕಳುಹಿಸಿದ್ದೇವೆ..." [ಅನ್ನಹ್ಲ್: 36].
ತ್ವಾಗೂತ್ ಅನ್ನು ನಿರಾಕರಿಸುವುದು ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುವುದನ್ನು ಅಲ್ಲಾಹು ತನ್ನ ಎಲ್ಲ ದಾಸರ ಮೇಲೂ ಕಡ್ಡಾಯಗೊಳಿಸಿದ್ದಾನೆ.
ಇಬ್ನುಲ್ ಕಯ್ಯಿಮ್ (ರಹಿಮಹುಲ್ಲಾ) ಹೇಳಿದರು: "ತ್ವಾಗೂತ್‌ನ ಅರ್ಥವೇನೆಂದರೆ: ದಾಸನು ತನ್ನ ಮಿತಿಯನ್ನು ಮೀರಿ, ತಾನು ಆರಾಧಿಸುವ, ಹಿಂಬಾಲಿಸುವ, ಅಥವಾ ವಿಧೇಯನಾಗುವ ವಿಷಯಗಳಲ್ಲಿ ಅತಿರೇಕ ಮಾಡುವುದು."
ತ್ವಾಗೂತ್‌ಗಳು ಅನೇಕವಿವೆ. ಆದರೆ ಅವುಗಳ ಪೈಕಿ ಐದು ಪ್ರಮುಖವಾಗಿವೆ: ಇಬ್ಲೀಸ್ (ಶೈತಾನ್) - ಅವನ ಮೇಲೆ ಅಲ್ಲಾಹನ ಶಾಪವಿರಲಿ, ತಾನು ಆರಾಧಿಸಲ್ಪಡುವುದಕ್ಕೆ ಸಮ್ಮತಿ ನೀಡುವವನು, ತನ್ನನ್ನು ಆರಾಧಿಸುವಂತೆ ಜನರಿಗೆ ಕರೆ ನೀಡುವವನು, ಅದೃಶ್ಯ ಜ್ಞಾನದ (ಇಲ್ಮುಲ್-ಗೈಬ್‌ನ) ಯಾವುದಾದರೂ ಭಾಗವನ್ನು ತಾನು ಬಲ್ಲೆನೆಂದು ವಾದಿಸುವವನು, ಮತ್ತು ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಬಿಟ್ಟು ಬೇರೆ ನಿಯಮಗಳಿಂದ ತೀರ್ಪು ನೀಡುವವನು.
ಇದಕ್ಕೆ ಆಧಾರ ಅಲ್ಲಾಹನ ಈ ವಚನ: "ಧರ್ಮದಲ್ಲಿ ಯಾವುದೇ ಬಲವಂತವಿಲ್ಲ. ಖಂಡಿತವಾಗಿಯೂ ಸನ್ಮಾರ್ಗವು (ಸತ್ಯವು) ದುರ್ಮಾರ್ಗದಿಂದ (ಅಸತ್ಯದಿಂದ) ಸ್ಪಷ್ಟವಾಗಿದೆ. ಆದ್ದರಿಂದ ಯಾರು ತ್ವಾಗೂತ್ ಅನ್ನು ನಿರಾಕರಿಸುತ್ತಾನೋ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ, ಅವನು ಖಂಡಿತವಾಗಿಯೂ ಎಂದಿಗೂ ತುಂಡಾಗದಂತಹ ಅತಿ ಭದ್ರವಾದ ಹಿಡಿಕೆಯನ್ನು ಹಿಡಿದುಕೊಂಡಿದ್ದಾನೆ. ಮತ್ತು ಅಲ್ಲಾಹು ಎಲ್ಲವನ್ನೂ ಆಲಿಸುವವನೂ, ಎಲ್ಲವನ್ನೂ ಅರಿಯುವವನೂ ಆಗಿದ್ದಾನೆ." [ಅಲ್-ಬಖರ: 256] ಇದುವೇ "ಲಾ ಇಲಾಹ ಇಲ್ಲಲ್ಲಾಹ್" ಎಂಬುದರ ಅರ್ಥ. ಹದೀಸ್‌ನಲ್ಲಿ ಹೀಗೆ ಬಂದಿದೆ: "ಧರ್ಮದ ಮೂಲ ಇಸ್ಲಾಮ್ ಆಗಿದೆ, ಮತ್ತು ಅದರ ಆಧಾರಸ್ತಂಭ ನಮಾಝ್ ಆಗಿದೆ, ಮತ್ತು ಅದರ ಅತ್ಯುನ್ನತ ಶಿಖರ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ (ಹೋರಾಟ) ಮಾಡುವುದಾಗಿದೆ."
ಅಲ್ಲಾಹನೇ ಅತ್ಯಂತ ಹೆಚ್ಚು ಬಲ್ಲವನು.