Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 28 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಂಕೋಚದವನು ಮತ್ತು ಉದಾರನು. ದಾಸನು ತನ್ನ ಕೈಗಳನ್ನು ಅವನ ಕಡೆಗೆ ಎತ್ತಿದಾಗ ಅವುಗಳನ್ನು ಖಾಲಿಯಾಗಿ ಹಿಂದಿರುಗಿಸಲು ಅವನು ಸಂಕೋಚಪಡುತ್ತಾನೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಯಾವುದೇ ಒಬ್ಬ ವ್ಯಕ್ತಿ ನನಗೆ ಸಲಾಂ ಹೇಳಿದರೂ, ನಾನು ಅವರ ಸಲಾಂಗೆ ಉತ್ತರಿಸುವ ತನಕ ಅಲ್ಲಾಹು ನನ್ನ ಆತ್ಮವನ್ನು ನನಗೆ ಮರಳಿಕೊಡದೇ ಇರಲಾರ."
ಇದರ ಸನದ್ ಹಸನ್ ಆಗಿದೆ. ಇದನ್ನು ಅಬೂದಾವೂದ್ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು." ಆಗ ಅವರು ಒಂದು ಬಾವಿ ತೋಡಿದರು. ಮತ್ತು ಹೇಳಿದರು: "ಇದು ಉಮ್ಮು ಸಅದ್‌ರಿಗೆ."
ಎಲ್ಲಾ ವರದಿಗಳ ಆಧಾರದಿಂದ ಹಸನ್. ಇದನ್ನು ಅಬೂದಾವೂದ್, ನಸಾಈ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ (ಕುಬ್ರಾದಲ್ಲಿ) ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ." ಅವರು ಕೇಳಿದರು: "ಇಷ್ಟೇ ಏನು?" ನಾನು ಹೇಳಿದೆ: "ಹೌದು." ಅವರು ಹೇಳಿದರು: "ಇದನ್ನು ಪಠಿಸಿದರೆ ಶೈತಾನನು ಹೀಗೆ ಹೇಳುವನು: ಈ ಇಡೀ ದಿನ ಅವನು ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ."
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ದಬ್ಬಾಳಿಕೆ ಮಾಡುವ ಆಡಳಿತಗಾರನ ಮುಂದೆ ನ್ಯಾಯವಾದ ಮಾತನ್ನು ಹೇಳುವುದು ಅತಿಶ್ರೇಷ್ಠ ಜಿಹಾದ್ ಆಗಿದೆ."
ಹಸನ್ ಲಿಗೈರಿಹಿ (ಇತರ ವರದಿಗಳಿಂದಾಗಿ ಹಸನ್). ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.