Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 72 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
ಒಮ್ಮೆ ಉಫೈರ್ ಎಂಬ ಹೆಸರಿನ ಒಂದು ಕತ್ತೆಯ ಮೇಲೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಓ ಮುಆದ್! ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದು ನಿನಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಜನರಿಗೆ ಈ ಸಿಹಿಸುದ್ದಿಯನ್ನು ತಿಳಿಸಲೇ?" ಅವರು ಉತ್ತರಿಸಿದರು: "ಬೇಡ, ಅವರಿಗೆ ಸಿಹಿ ಸುದ್ದಿ ತಿಳಿಸಬೇಡ. ಅವರು ಅದರ ಮೇಲೆ ಅವಲಂಬಿತರಾಗಬಹುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುದೈಬಿಯಾದಲ್ಲಿ ನಮ್ಮೊಡನೆ ಫಜ್ರ್ ನಮಾಝ್ ನಿರ್ವಹಿಸಿದರು. ಅದರ ಹಿಂದಿನ ರಾತ್ರಿ ಮಳೆ ಸುರಿದಿತ್ತು. ನಮಾಝ್ ನಿರ್ವಹಿಸಿದ ಬಳಿಕ ಅವರು ಜನರ ಕಡೆಗೆ ತಿರುಗಿ ಕೇಳಿದರು: "ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "(ಅಲ್ಲಾಹು ಹೇಳಿದನು): ನನ್ನ ದಾಸರಲ್ಲಿ ಕೆಲವರು ಸತ್ಯವಿಶ್ವಾಸಿಗಳಾಗಿ ಮತ್ತು ಕೆಲವರು ಸತ್ಯನಿಷೇಧಿಗಳಾಗಿ ಬೆಳಗನ್ನು ಪ್ರವೇಶಿಸಿದ್ದಾರೆ. ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನಲ್ಲಿ ವಿಶ್ವಾಸವಿಟ್ಟನು ಮತ್ತು ನಕ್ಷತ್ರಗಳನ್ನು ನಿಷೇಧಿಸಿದನು. ಇಂತಿಂತಹ ನಕ್ಷತ್ರದ ಉದಯದಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನನ್ನು ನಿಷೇಧಿಸಿದನು ಮತ್ತು ನಕ್ಷತ್ರಗಳಲ್ಲಿ ವಿಶ್ವಾಸವಿಟ್ಟನು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ. ಅವನು ತಕ್ಕಡಿಯನ್ನು ತಗ್ಗಿಸುತ್ತಾನೆ ಮತ್ತು ಅದನ್ನು ಏರಿಸುತ್ತಾನೆ. ಹಗಲಿನ ಕರ್ಮಗಳಿಗಿಂತ ಮೊದಲು ರಾತ್ರಿಯ ಕರ್ಮಗಳು ಅವನ ಕಡೆಗೆ ಏರಿಸಲ್ಪಡುತ್ತವೆ, ಮತ್ತು (ಮುಂದಿನ) ರಾತ್ರಿಯ ಕರ್ಮಗಳಿಗಿಂತ ಮೊದಲು ಹಗಲಿನ ಕರ್ಮಗಳು (ಅವನ ಕಡೆಗೆ ಏರಿಸಲ್ಪಡುತ್ತವೆ). ಅವನ ಪರದೆಯು 'ಬೆಳಕಾಗಿದೆ' — ಇನ್ನೊಂದು ವರದಿಯಲ್ಲಿ: ಬೆಂಕಿ ಎಂದಿದೆ — ಒಂದು ವೇಳೆ ಅವನು ಅದನ್ನು (ಪರದೆಯನ್ನು) ಸರಿಸಿದರೆ, ಅವನ ಮುಖದ ಪ್ರಕಾಶವು ಸೃಷ್ಟಿಗಳಲ್ಲಿ ಅವನ ದೃಷ್ಟಿಯು ತಲುಪುವವರೆಗಿನ ಎಲ್ಲವನ್ನೂ ಸುಟ್ಟುಹಾಕುತ್ತಿತ್ತು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ಅಲ್ಲಾಹು ನನಗಾಗಿ, ನನ್ನ ಸಮುದಾಯದ (ಜನರು ಮಾಡುವ) ಪ್ರಮಾದಗಳನ್ನು, ಮರೆವನ್ನು, ಮತ್ತು ಅವರು ಬಲವಂತದಿಂದ ಮಾಡಿರುವುದನ್ನು ಕ್ಷಮಿಸಿದ್ದಾನೆ."
ನವವಿ ಹೇಳಿದರು: "ಹದೀಸ್ ಹಸನ್". ಇದನ್ನು ಇಬ್ನ್ ಮಾಜ, ಬೈಹಕಿ ಹಾಗೂ ಇತರರು ವರದಿ ಮಾಡಿದ್ದಾರೆ.
“ಓ ಅಲ್ಲಾಹನ ಸಂದೇಶವಾಹಕರೇ! ಜನರ ಪೈಕಿ ಪುನರುತ್ಥಾನ ದಿನ ತಮ್ಮ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರು?” ಎಂದು ಕೇಳಲಾಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಓ ಅಬೂಹುರೈರ! ಹದೀಸಿನ ಬಗ್ಗೆ ತಮಗಿರುವ ಆಸಕ್ತಿಯನ್ನು ಕಂಡು ತಮಗಿಂತ ಮೊದಲು ಯಾರೂ ಈ ಹದೀಸಿನ ಬಗ್ಗೆ ಕೇಳಲಾರರು ಎಂದು ನಾನು ಭಾವಿಸಿದ್ದೆ. ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ತನ್ನ ಹೃದಯ ಮತ್ತು ಮನಸ್ಸಿನಿಂದ ನಿಷ್ಕಳಂಕವಾಗಿ ಹೇಳಿದವನು.”
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಮೂರ್ತಿಗಳ ಮೇಲೆ ಅಥವಾ ನಿಮ್ಮ ಪೂರ್ವಜರ ಮೇಲೆ ಆಣೆ ಮಾಡಬೇಡಿ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.