Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 17 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
"ನಮಾಝ್, ಉಪವಾಸ ಮತ್ತು ದಾನಧರ್ಮಗಳ ಪದವಿಗಿಂತಲೂ ಉತ್ತಮವಾದುದನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು (ಸಹಾಬಾಗಳು) ಹೇಳಿದರು: "ಖಂಡಿತ (ತಿಳಿಸಿಕೊಡಿ)." ಅವರು (ಪ್ರವಾದಿ) ಹೇಳಿದರು: "ಜನರ ನಡುವೆ ಇರುವ ಸಂಬಂಧವನ್ನು ಸರಿಪಡಿಸುವುದು. ಏಕೆಂದರೆ, ಪರಸ್ಪರ ಸಂಬಂಧಗಳು ಹದಗೆಡುವುದು (ಧರ್ಮವನ್ನು) ಬೋಳಿಸುವಂತಹ (ನಾಶಮಾಡುವ) ಕೃತ್ಯವಾಗಿದೆ."
ಸಹೀಹ್ ಇದನ್ನು ಅಬೂದಾವೂದ್ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶದಲ್ಲಿರುವ ಮೋಡಗಳನ್ನು ತಲುಪಿ, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೂ, ನಾನು ನಿನ್ನನ್ನು ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನನ್ನನ್ನು ಭೇಟಿಯಾದರೆ, ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನ ಬಳಿಗೆ ಬರುತ್ತೇನೆ."
ಹಸನ್. ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
"ನೀವು ಹೊಲಗದ್ದೆಗಳನ್ನು (ಅತಿಯಾಗಿ) ಇಟ್ಟುಕೊಳ್ಳಬೇಡಿ, (ಹಾಗೆ ಮಾಡಿದರೆ) ನೀವು ಈ ಪ್ರಪಂಚದಲ್ಲೇ ಆಸಕ್ತರಾಗುತ್ತೀರಿ".
ಹಸನ್ ಲಿಗೈರಿಹಿ (ಇತರ ವರದಿಗಳಿಂದಾಗಿ ಹಸನ್). ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಮೋಕ್ಷ ಎಂದರೇನು?" ಅವರು ಉತ್ತರಿಸಿದರು: "ನಿಮ್ಮ ನಾಲಿಗೆಯನ್ನು ನಿಯಂತ್ರಿಸಿ, ನಿಮ್ಮ ಮನೆ ನಿಮಗೆ ವಿಶಾಲವಾಗಿರಲಿ, ಮತ್ತು ನಿಮ್ಮ ಪಾಪಗಳಿಗಾಗಿ ಅತ್ತಿರಿ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾವುದೇ ಒಬ್ಬ ವ್ಯಕ್ತಿ ಒಂದು ತಪ್ಪು ಮಾಡಿ, ನಂತರ ಎದ್ದು ವುದೂ ನಿರ್ವಹಿಸಿ, ನಮಾಝ್ ಮಾಡಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಅಲ್ಲಾಹು ಅವನಿಗೆ ಕ್ಷಮಿಸದೇ ಇರಲಾರ." ನಂತರ ಅವರು ಈ ವಚನವನ್ನು ಪಠಿಸಿದರು: "ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ." [ಆಲು ಇಮ್ರಾನ್:135] "
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ (ಕುಬ್ರಾದಲ್ಲಿ), ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು, ನಂತರ ಅದನ್ನು ಬಿಟ್ಟು ಹೊರಟುಹೋಗುತ್ತಾನೆ".
ಸಹೀಹ್ ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ (ಹೆಚ್ಚು ತಿನ್ನುವುದು) ಅನಿವಾರ್ಯವಾದರೆ, (ಅವನ ಹೊಟ್ಟೆಯ) ಮೂರನೇ ಒಂದು ಭಾಗವು ಅವನ ಆಹಾರಕ್ಕಾಗಿ, ಮೂರನೇ ಒಂದು ಭಾಗವು ಅವನ ಪಾನೀಯಕ್ಕಾಗಿ, ಮತ್ತು ಮೂರನೇ ಒಂದು ಭಾಗವು ಅವನ ಉಸಿರಾಟಕ್ಕಾಗಿ (ಇರಲಿ)".
ಸಹೀಹ್ ಇದನ್ನು ಇಮಾಂ ಅಹ್ಮದ್, ತಿರ್ಮಿದಿ, ನಸಾಈ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.