Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 34 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
"ನಮಾಝ್, ಉಪವಾಸ ಮತ್ತು ದಾನಧರ್ಮಗಳ ಪದವಿಗಿಂತಲೂ ಉತ್ತಮವಾದುದನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು (ಸಹಾಬಾಗಳು) ಹೇಳಿದರು: "ಖಂಡಿತ (ತಿಳಿಸಿಕೊಡಿ)." ಅವರು (ಪ್ರವಾದಿ) ಹೇಳಿದರು: "ಜನರ ನಡುವೆ ಇರುವ ಸಂಬಂಧವನ್ನು ಸರಿಪಡಿಸುವುದು. ಏಕೆಂದರೆ, ಪರಸ್ಪರ ಸಂಬಂಧಗಳು ಹದಗೆಡುವುದು (ಧರ್ಮವನ್ನು) ಬೋಳಿಸುವಂತಹ (ನಾಶಮಾಡುವ) ಕೃತ್ಯವಾಗಿದೆ."
ಸಹೀಹ್ ಇದನ್ನು ಅಬೂದಾವೂದ್ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಂಕೋಚದವನು ಮತ್ತು ಉದಾರನು. ದಾಸನು ತನ್ನ ಕೈಗಳನ್ನು ಅವನ ಕಡೆಗೆ ಎತ್ತಿದಾಗ ಅವುಗಳನ್ನು ಖಾಲಿಯಾಗಿ ಹಿಂದಿರುಗಿಸಲು ಅವನು ಸಂಕೋಚಪಡುತ್ತಾನೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಸ್ವರ್ಗದಲ್ಲಿ ನೂರು ದರ್ಜೆಗಳಿವೆ. ಪ್ರತಿ ಎರಡು ದರ್ಜೆಗಳ ನಡುವಿನ ಅಂತರವು ಆಕಾಶ ಮತ್ತು ಭೂಮಿಯ ನಡುವಿನ ಅಂತರದಷ್ಟಿದೆ. 'ಫಿರ್ದೌಸ್' ಅವುಗಳಲ್ಲಿ ಅತ್ಯುನ್ನತ ದರ್ಜೆಯಾಗಿದೆ. ಅದರಿಂದಲೇ ಸ್ವರ್ಗದ ನಾಲ್ಕು ನದಿಗಳು ಉಕ್ಕಿ ಹರಿಯುತ್ತವೆ. ಅದರ ಮೇಲೆ 'ಅರ್ಶ್' (ಅಲ್ಲಾಹುವಿನ ಸಿಂಹಾಸನ) ಇದೆ. ಆದ್ದರಿಂದ, ನೀವು ಅಲ್ಲಾಹುವಿನಲ್ಲಿ ಬೇಡುವಾಗ, 'ಫಿರ್ದೌಸ್' ಅನ್ನು ಬೇಡಿರಿ".
ಸಹೀಹ್ ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
"ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ. ಆದ್ದರಿಂದ ಆ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸುವವರಲ್ಲಿ ಸೇರಲು ನಿನಗೆ ಸಾಧ್ಯವಾಗುವುದಾದರೆ ಸೇರಿಕೋ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
ನಾವು ಮಳೆ ಮತ್ತು ತೀವ್ರ ಕತ್ತಲೆಯ ರಾತ್ರಿ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗಾಗಿ ನಮಾಝ್ ಮಾಡಲು ಹುಡುಕುತ್ತಾ ಹೊರಟೆವು. ನಾನು ಅವರನ್ನು ಕಂಡಾಗ, ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ನಂತರ ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ಅವರು ಹೇಳಿದರು: “ಹೇಳು.” ನಾನು ಕೇಳಿದೆ: "ನಾನು ಏನು ಹೇಳಬೇಕು?" ಅವರು ಹೇಳಿದರು: ಸಂಜೆಯಾಗುವಾಗ ಮತ್ತು ಬೆಳಗಾಗುವಾಗ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಮತ್ತು ರಕ್ಷೆ ಬೇಡುವ ಎರಡು ಸೂರಗಳನ್ನು (ಸೂರ ಫಲಕ್ ಮತ್ತು ಸೂರ ನಾಸ್) ಮೂರು ಬಾರಿ ಪಠಿಸು. ಅದು ನಿನಗೆ ಎಲ್ಲದ್ದಕ್ಕೂ ಸಾಕಾಗುತ್ತದೆ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
“ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಅನ್ಯರಿಲ್ಲ) ಅತಿಶ್ರೇಷ್ಠ ಸ್ಮರಣೆಯಾಗಿದೆ ಮತ್ತು ಅಲ್-ಹಮ್ದುಲಿಲ್ಲಾಹ್ (ಅಲ್ಲಾಹನಿಗೆ ಸರ್ವಸ್ತುತಿ) ಅತಿಶ್ರೇಷ್ಠ ಪ್ರಾರ್ಥನೆಯಾಗಿದೆ.”
ಹಸನ್. ಇದನ್ನು ತಿರ್ಮಿದಿ, ನಸಾಈ (ಕುಬ್ರಾದಲ್ಲಿ) ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶದಲ್ಲಿರುವ ಮೋಡಗಳನ್ನು ತಲುಪಿ, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೂ, ನಾನು ನಿನ್ನನ್ನು ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನನ್ನನ್ನು ಭೇಟಿಯಾದರೆ, ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನ ಬಳಿಗೆ ಬರುತ್ತೇನೆ."
ಹಸನ್. ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.