Skip to content

"ಒಂದು ವೇಳೆ ಜನರಿಗೆ ಅಝಾನ್ (ನಮಾಝ್‌ನ ಕರೆ) ನೀಡುವುದರಲ್ಲಿ ಮತ್ತು (ಜಮಾಅತ್ ನಮಾಝ್‌ನ) ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಏನಿದೆ (ಎಷ್ಟು ಪುಣ್ಯವಿದೆ) ಎಂದು ತಿಳಿದಿದ್ದರೆ, ನಂತರ ಚೀಟಿ ಹಾಕುವುದರ ಹೊರತು ಅವರಿಗೆ ಅದಕ್ಕಾಗಿ ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಚೀಟಿ ಹಾಕುತ್ತಿದ್ದರು.

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ಒಂದು ವೇಳೆ ಜನರಿಗೆ ಅಝಾನ್ (ನಮಾಝ್‌ನ ಕರೆ) ನೀಡುವುದರಲ್ಲಿ ಮತ್ತು (ಜಮಾಅತ್ ನಮಾಝ್‌ನ) ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಏನಿದೆ (ಎಷ್ಟು ಪುಣ್ಯವಿದೆ) ಎಂದು ತಿಳಿದಿದ್ದರೆ, ನಂತರ ಚೀಟಿ ಹಾಕುವುದರ ಹೊರತು ಅವರಿಗೆ ಅದಕ್ಕಾಗಿ ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಚೀಟಿ ಹಾಕುತ್ತಿದ್ದರು. ನಮಾಝ್‌ಗೆ ಬೇಗನೆ ಹೋಗುವುದರಲ್ಲಿ ಏನಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಸ್ಪರ್ಧಿಸುತ್ತಿದ್ದರು. 'ಅತಮಾ' (ಇಶಾ ನಮಾಝ್) ಮತ್ತು ಸುಬ್ಹ್ (ಫಜ್ರ್) ನಮಾಝ್‌ಗಳನ್ನು (ಜಮಾಅತ್‌ನಲ್ಲಿ ನಿರ್ವಹಿಸುವುದರಲ್ಲಿ) ಏನಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಖಂಡಿತವಾಗಿಯೂ ತೆವಳಿಕೊಂಡಾದರೂ ಅವುಗಳಿಗೆ ಬರುತ್ತಿದ್ದರು".

«لَوْ يَعْلَمُ النَّاسُ مَا فِي النِّدَاءِ وَالصَّفِّ الْأَوَّلِ ثُمَّ لَمْ يَجِدُوا إِلَّا أَنْ يَسْتَهِمُوا عَلَيْهِ لَاسْتَهَمُوا، وَلَوْ يَعْلَمُونَ مَا فِي التَّهْجِيرِ لَاسْتَبَقُوا إِلَيْهِ، وَلَوْ يَعْلَمُونَ مَا فِي الْعَتَمَةِ وَالصُّبْحِ لَأَتَوْهُمَا وَلَوْ حَبْوًا».

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಂದು ವೇಳೆ ಜನರಿಗೆ ಅಝಾನ್ ನೀಡುವುದರಲ್ಲಿ ಮತ್ತು ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಇರುವ ಶ್ರೇಷ್ಠತೆ, ಒಳಿತು ಮತ್ತು ಸಮೃದ್ಧಿಯ ಬಗ್ಗೆ ತಿಳಿದಿದ್ದರೆ, ನಂತರ ಅವೆರಡಕ್ಕೂ ಆದ್ಯತೆ ಮತ್ತು ಪ್ರಾಮುಖ್ಯತೆ ನೀಡಲು ಅವರಿಗೆ ಚೀಟಿ ಹಾಕುವುದರ ಹೊರತು ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅವೆರಡಿಗಾಗಿ ಚೀಟಿ ಹಾಕುತ್ತಿದ್ದರು. ನಮಾಝ್‌ಗಾಗಿ ಅದರ ಮೊದಲ ಸಮಯದಲ್ಲಿ ಬೇಗನೆ ಹೋಗುವುದರಲ್ಲಿ ಏನಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಸ್ಪರ್ಧಿಸುತ್ತಿದ್ದರು. ಇಶಾ ನಮಾಝ್ ಮತ್ತು ಫಜ್ರ್ ನಮಾಝ್‌ಗೆ (ಜಮಾಅತ್‌ನಲ್ಲಿ) ಬರುವುದರಲ್ಲಿರುವ ಪುಣ್ಯದ ಪ್ರಮಾಣವು ಅವರಿಗೆ ತಿಳಿದಿದ್ದರೆ, ಅವರು ಮಗು ತನ್ನ ಆರಂಭಿಕ ಹಂತದಲ್ಲಿ ಮೊಣಕಾಲಲ್ಲಿ ತೆವಳುವಂತೆ ತೆವಳಿಕೊಂಡಾದರೂ ಅವುಗಳಿಗೆ ಬರುತ್ತಿದ್ದರು.

ಹದೀಸಿನ ಪ್ರಯೋಜನಗಳು

ಅಝಾನ್‌ನ ಶ್ರೇಷ್ಠತೆಯನ್ನು ವಿವರಿಸಲಾಗಿದೆ.

ಮೊದಲ ಸಾಲಿನ ಮತ್ತು ಇಮಾಮ್‌ಗೆ ಹತ್ತಿರವಿರುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ.

ನಮಾಝ್‌ಗಾಗಿ ಅದರ ಅಪೇಕ್ಷಣೀಯವಾದ ಮೊದಲ ಸಮಯದಲ್ಲಿ ಬೇಗನೆ ಹೋಗುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಏಕೆಂದರೆ ಅದರಲ್ಲಿ ಮಹತ್ತರವಾದ ಪುಣ್ಯವಿದೆ ಮತ್ತು ಅದರಿಂದ ಅನೇಕ ಪ್ರಯೋಜನಗಳಿವೆ. ಉದಾಹರಣೆಗೆ: ಮೊದಲ ಸಾಲನ್ನು ಪಡೆದುಕೊಳ್ಳುವುದು, ನಮಾಝನ್ನು ಅದರ ಆರಂಭದಿಂದಲೇ ನಿರ್ವಹಿಸುವುದು, ಐಚ್ಛಿಕ (ನಫಿಲ್) ನಮಾಝ್ ನಿರ್ವಹಿಸುವುದು, ಕುರ್‌ಆನ್ ಪಠಿಸುವುದು, ಮಲಕ್‌ದೂತರು ಅವನಿಗಾಗಿ ಕ್ಷಮೆಯನ್ನು ಯಾಚಿಸುವುದು, ಮತ್ತು ಅವನು ನಮಾಝ್‌ಗಾಗಿ ಕಾಯುತ್ತಿರುವಾಗಲೆಲ್ಲಾ ನಮಾಝ್‌ನಲ್ಲಿಯೇ ಇರುತ್ತಾನೆ ಇತ್ಯಾದಿ.

ಈ ಎರಡು ನಮಾಝ್‌ಗಳ (ಇಶಾ ಮತ್ತು ಫಜ್ರ್) ಜಮಾಅತ್‌ಗೆ ಹಾಜರಾಗಲು ಮಹತ್ತರವಾದ ಪ್ರೋತ್ಸಾಹ, ಮತ್ತು ಅದರಲ್ಲಿರುವ ಅಧಿಕ ಪುಣ್ಯವನ್ನು ವಿವರಿಸಲಾಗಿದೆ. ಏಕೆಂದರೆ ಅವೆರಡೂ ನಿದ್ದೆಯ ಆರಂಭ ಮತ್ತು ಅಂತ್ಯವನ್ನು ಕದಡುವುದರಿಂದ ಮನಸ್ಸಿಗೆ ಕಷ್ಟಕರವಾಗಿರುತ್ತದೆ. ಇದೇ ಕಾರಣಕ್ಕಾಗಿ, ಈ ಎರಡು ನಮಾಝ್‌ಗಳು ಮುನಾಫಿಕ್‌ಗಳಿಗೆ (ಕಪಟವಿಶ್ವಾಸಿಗಳಿಗೆ) ಅತ್ಯಂತ ಭಾರವಾದ ನಮಾಝ್‌ಗಳಾಗಿದ್ದವು.

ಇಮಾಮ್ ನವವಿ ಹೇಳುತ್ತಾರೆ: "ಜನರು ಪೈಪೋಟಿ ನಡೆಸುವ ಮತ್ತು ಸ್ಪರ್ಧಿಸುವ ಹಕ್ಕುಗಳಲ್ಲಿ ಚೀಟಿ ಹಾಕಬಹುದೆಂದು ಇದರಲ್ಲಿ ದೃಢೀಕರಿಸಲಾಗಿದೆ.

ಎರಡನೇ ಸಾಲು ಮೂರನೇ ಸಾಲಿಗಿಂತ ಶ್ರೇಷ್ಠವಾಗಿದೆ. ಮೂರನೇ ಸಾಲು ನಾಲ್ಕನೇ ಸಾಲಿಗಿಂತ ಶ್ರೇಷ್ಠವಾಗಿದೆ. ಹೀಗೆಯೇ ಮುಂದುವರಿಯುತ್ತದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (1/ 126) (615).

ಸಹೀಹ್ ಮುಸ್ಲಿಮ್. (1/ 325) (437).

ಇನ್ನಷ್ಟು (2)

النهاية في غريب الحديث والأثر (1000) (185).

البحر المحيط الثجاج في شرح صحيح الإمام مسلم بن الحجاج (10/ 267).