Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 20 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ನಾಲ್ಕು (ಗುಣಲಕ್ಷಣಗಳು) ಯಾರಲ್ಲಿವೆಯೋ ಅವನು ಮುನಾಫಿಕ್ (ಕಪಟವಿಶ್ವಾಸಿ) ಆಗಿರುತ್ತಾನೆ. ಅವುಗಳಲ್ಲಿ ಒಂದು ಗುಣಲಕ್ಷಣವು ಯಾರಲ್ಲಿರುತ್ತದೆಯೋ, ಅವನು ಅದನ್ನು ಬಿಡುವವರೆಗೆ ಅವನಲ್ಲಿ 'ನಿಫಾಖ್' (ಕಪಟತನ) ದ ಒಂದು ಗುಣಲಕ್ಷಣವಿರುತ್ತದೆ: ಅವನು ಮಾತನಾಡಿದಾಗ ಸುಳ್ಳು ಹೇಳುತ್ತಾನೆ. ಅವನು ವಾಗ್ದಾನ ಮಾಡಿದಾಗ ಅದನ್ನು ಮುರಿಯುತ್ತಾನೆ. ಅವನು ಜಗಳವಾಡಿದಾಗ ಕೆಟ್ಟದಾಗಿ ವರ್ತಿಸುತ್ತಾನೆ. ಅವನು ಒಪ್ಪಂದ ಮಾಡಿಕೊಂಡಾಗ ದ್ರೋಹ ಬಗೆಯುತ್ತಾನೆ".
ಸಹೀಹ್ ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಮುಆದ್ ಬಿನ್ ಜಬಲ್‌ರನ್ನು ಯಮನ್‌ಗೆ ಕಳುಹಿಸುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ. ಆದ್ದರಿಂದ ನೀವು ಅವರ ಬಳಿಗೆ ಹೋದರೆ, ಅವರನ್ನು “ಅಲ್ಲಾಹನ ಹೊರತು ಆರಾಧನೆಗೆ ಯಾರೂ ಅರ್ಹರಲ್ಲ ಮತ್ತು ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆಂದು” ಸಾಕ್ಷಿ ವಹಿಸಲು ಆಹ್ವಾನಿಸಿರಿ. ಅವರು ನಿಮ್ಮ ಮಾತನ್ನು ಅನುಸರಿಸಿದರೆ, ಅಲ್ಲಾಹು ಅವರ ಮೇಲೆ ಹಗಲು ರಾತ್ರಿಯಲ್ಲಿ ಐದು ನಮಾಝ್‌ಗಳನ್ನು ಕಡ್ಡಾಯಗೊಳಿಸಿದ್ದಾನೆಂದು ತಿಳಿಸಿರಿ. ಅವರು ಅದನ್ನೂ ಅನುಸರಿಸಿದರೆ, ಅಲ್ಲಾಹನು ಅವರ ಮೇಲೆ ಝಕಾತನ್ನು ಕಡ್ಡಾಯಗೊಳಿಸಿದ್ದಾನೆಂದು ಹೇಳಿರಿ. ಅದು ಅವರಲ್ಲಿರುವ ಶ್ರೀಮಂತರಿಂದ ತೆಗೆದು ಅವರಲ್ಲಿರುವ ಬಡವರಿಗೆ ನೀಡಲಾಗುತ್ತದೆ. ಅವರು ಅದನ್ನೂ ಅನುಸರಿಸಿದರೆ, ಅವರ ಅತ್ಯುತ್ತಮ ಸಂಪತ್ತಿನ ಬಗ್ಗೆ ಎಚ್ಚರ ವಹಿಸಿರಿ. (ಅದನ್ನು ವಶಪಡಿಸಬೇಡಿ). ಅನ್ಯಾಯಕ್ಕೊಳಗಾದವನ ಪ್ರಾರ್ಥನೆಯನ್ನು ಭಯಪಡಿರಿ. ಏಕೆಂದರೆ ಅದರ ಮತ್ತು ಅಲ್ಲಾಹನ ನಡುವೆ ಯಾವುದೇ ಪರದೆ ಇರುವುದಿಲ್ಲ.”
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ನಾನು ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನನಗೆ ಏನಾದರೂ ಪ್ರತಿಫಲ ದೊರೆಯುವುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾವುದೇ ಮನುಷ್ಯನು ಇನ್ನೊಬ್ಬನನ್ನು ಫಾಸಿಕ್ (ದುಷ್ಕರ್ಮಿ) ಎಂದು ಆರೋಪಿಸಬಾರದು, ಅಥವಾ ಸತ್ಯನಿಷೇಧಿಯೆಂದು ಆರೋಪಿಸಬಾರದು. ಏಕೆಂದರೆ, ಆ ವ್ಯಕ್ತಿ ಅವನು ಹೇಳಿದಂತೆ ಇಲ್ಲದಿದ್ದರೆ, ಅದು ಹೇಳಿದವನಿಗೆ ಮರಳುತ್ತದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಾಲ್ಕು ಲಕ್ಷಣಗಳು—ಇವು ಯಾರಲ್ಲಿವೆಯೋ ಅವನು ಶುದ್ಧ ಕಪಟವಿಶ್ವಾಸಿಯಾಗಿದ್ದಾನೆ. ಇವುಗಳಲ್ಲೊಂದು ಅಂಶ ಯಾರಲ್ಲಿದೆಯೋ ಅವನು ಅದನ್ನು ತೊರೆಯುವ ತನಕ ಕಾಪಟ್ಯದ ಒಂದಂಶವನ್ನು ಹೊಂದಿರುತ್ತಾನೆ. ಮಾತನಾಡಿದರೆ ಸುಳ್ಳು ಹೇಳುವುದು, ಕರಾರು ಮಾಡಿದರೆ ದ್ರೋಹವೆಸಗುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು ಮತ್ತು ತರ್ಕಿಸಿದರೆ ಕೆಟ್ಟದಾಗಿ ವರ್ತಿಸುವುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಅಲಕ'ದ (ಹೆಪ್ಪುಗಟ್ಟಿದ ರಕ್ತದ) ರೂಪದಲ್ಲಿರುತ್ತಾನೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಮುದ್ಗ'ದ (ಮಾಂಸ ಮುದ್ದೆಯ) ರೂಪದಲ್ಲಿರುತ್ತಾನೆ. ನಂತರ ಅವನ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಿ, ನಾಲ್ಕು ವಿಷಯಗಳನ್ನು ಬರೆಯುವಂತೆ ಆಜ್ಞಾಪಿಸಲಾಗುತ್ತದೆ. ದೇವದೂತರು ಅವನ ಜೀವನೋಪಾಯ, ಆಯುಷ್ಯ, ಕರ್ಮ ಮತ್ತು ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ ಎಂಬುದನ್ನು ಬರೆಯುತ್ತಾರೆ. ನಂತರ ಅವರು ಅವನಿಗೆ ಆತ್ಮವನ್ನು ಊದುತ್ತಾರೆ. ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ನರಕವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ನರಕವನ್ನು ಪ್ರವೇಶಿಸುತ್ತಾನೆ. ಅದೇ ರೀತಿ, ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ನರಕದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ಸ್ವರ್ಗವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.