عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
839 ಹದೀಸ್‌ಗಳು
ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ
ವರ್ಗಗಳು
ಹದೀಸ್‌ನ ದರ್ಜೆ
ವರದಿಯಾದ ಗ್ರಂಥ
ವರದಿಗಾರ
ಎಲ್ಲಾ ವರದಿಗಾರರನ್ನು ತೋರಿಸಿ (14)
"ಓ ಬಿಲಾಲ್, ಇಸ್ಲಾಮಿನಲ್ಲಿ ನೀನು ಮಾಡಿದ ಕಾರ್ಯಗಳಲ್ಲಿ, ನೀನು ಅತಿ ಹೆಚ್ಚು ನಿರೀಕ್ಷೆ (ಭರವಸೆ) ಇಟ್ಟಿರುವ ಕಾರ್ಯ ಯಾವುದು ಎಂದು ನನಗೆ ಹೇಳು. ಏಕೆಂದರೆ, ನಾನು ಸ್ವರ್ಗದಲ್ಲಿ ನನ್ನ ಮುಂದೆ ನಿನ್ನ ಚಪ್ಪಲಿಗಳ ಸದ್ದು (ಹೆಜ್ಜೆಗುರುತಿನ ಶಬ್ದ) ಕೇಳಿದೆನು." ಅವರು (ಬಿಲಾಲ್) ಹೇಳಿದರು: "ನಾನು ರಾತ್ರಿ ಅಥವಾ ಹಗಲಿನ ಯಾವುದೇ ಸಮಯದಲ್ಲಿ ಶುದ್ಧೀಕರಣ (ವುಧೂ) ಮಾಡಿದಾಗಲೆಲ್ಲಾ, ಆ ಶುದ್ಧೀಕರಣದೊಂದಿಗೆ ನನಗೆ ವಿಧಿಸಲಾದಷ್ಟು (ನನ್ನ ಹಣೆಬರಹದಲ್ಲಿ ಬರೆದಷ್ಟು) ನಮಾಝ್ ನಿರ್ವಹಿಸದೇ ಬಿಟ್ಟಿಲ್ಲ. ಇದನ್ನೇ ನಾನು (ನನ್ನ ಕಾರ್ಯಗಳಲ್ಲಿ) ಅತಿ ಹೆಚ್ಚು ನಿರೀಕ್ಷೆಯುಳ್ಳ ಕಾರ್ಯವೆಂದು ಭಾವಿಸುತ್ತೇನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪು ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತಾರೆ (ಅಷ್ಟು ಪ್ರಕಾಶಮಾನವಾಗಿರುತ್ತಾರೆ). ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ. ಅವರು (ಸ್ವರ್ಗವಾಸಿಗಳು) ಮೂತ್ರ ವಿಸರ್ಜಿಸುವುದಿಲ್ಲ, ಮಲ ವಿಸರ್ಜಿಸುವುದಿಲ್ಲ, ಉಗುಳುವುದಿಲ್ಲ, ಮತ್ತು ಮೂಗಿನ ಸಿಂಬಳವನ್ನು ಹೊರಹಾಕುವುದಿಲ್ಲ. ಅವರ ಬಾಚಣಿಗೆಗಳು ಚಿನ್ನದ್ದಾಗಿರುತ್ತವೆ, ಅವರ ಬೆವರು ಕಸ್ತೂರಿಯ (ಸುವಾಸನೆಯಂತೆ) ಇರುತ್ತದೆ, ಅವರ ಧೂಪದಾನಿಗಳು ಊದ್ - ಸುವಾಸಿತ ಮರದಿಂದ ಕೂಡಿರುತ್ತವೆ. ಅವರ ಸಂಗಾತಿಗಳು 'ಹೂರ್' (ಅಪ್ಸರೆ) ಆಗಿರುತ್ತಾರೆ. ಅವರೆಲ್ಲರೂ ಒಂದೇ ಆಕೃತಿಯಲ್ಲಿ, ತಮ್ಮ ತಂದೆ ಆದಮ್ (ಅವರ ಮೇಲೆ ಶಾಂತಿಯಿರಲಿ) ರ ರೂಪದಲ್ಲಿ, ಅರವತ್ತು ಮೊಳ ಎತ್ತರವಾಗಿರುತ್ತಾರೆ".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಾನು ಪುನರುತ್ಥಾನ ದಿನದಂದು ಮನುಷ್ಯರ ಸರದಾರನಾಗಿರುವೆನು. ಅದು ಏಕೆ ಎಂದು ನಿಮಗೆ ತಿಳಿದಿದೆಯೇ? ಅಲ್ಲಾಹು ಮೊದಲಿನಿಂದ ಕೊನೆಯವರೆಗಿನ ಎಲ್ಲಾ ಜನರನ್ನು ಒಂದೇ ಮೈದಾನದಲ್ಲಿ ಒಟ್ಟುಗೂಡಿಸುವನು. ಕರೆಯುವವನ ಧ್ವನಿ ಅವರೆಲ್ಲರಿಗೂ ಕೇಳಿಸುವುದು ಮತ್ತು ದೃಷ್ಟಿಯು ಎಲ್ಲರನ್ನೂ ವ್ಯಾಪಿಸುವುದು. ಸೂರ್ಯನು ಸಮೀಪಕ್ಕೆ ಬರುವನು. ಜನರು ತಾಳಲಾರದಷ್ಟು ಮತ್ತು ಸಹಿಸಲಾಗದಷ್ಟು ದುಃಖ ಮತ್ತು ಸಂಕಟವನ್ನು ಅನುಭವಿಸುವರು. ಆಗ ಜನರು ಹೇಳುವರು: 'ನಿಮಗೆ ಏನಾಗಿದೆ, ನಿಮಗೆ ಕಾಣುತ್ತಿಲ್ಲವೇ? ನಿಮ್ಮ ಪರವಾಗಿ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಶಿಫಾರಸು ಮಾಡುವವರನ್ನು ನೀವು ಹುಡುಕುವುದಿಲ್ಲವೇ?' ಆಗ ಕೆಲವರು ಇತರರಿಗೆ ಹೇಳುವರು: 'ಆದಮ್‌ರ ಬಳಿಗೆ ಹೋಗಿರಿ.' ಆಗ ಅವರು ಆದಮ್ (ಅವರ ಮೇಲೆ ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: 'ನೀವು ಮನುಷ್ಯರ ತಂದೆಯಾಗಿದ್ದೀರಿ, ಅಲ್ಲಾಹು ನಿಮ್ಮನ್ನು ಅವನ ಕೈಯಿಂದ ಸೃಷ್ಟಿಸಿದನು, ಅವನ ಆತ್ಮದಿಂದ ನಿಮ್ಮಲ್ಲಿ ಊದಿದನು ಮತ್ತು ನಿಮಗೆ ಸಾಷ್ಟಾಂಗ ಮಾಡಲು ದೇವದೂತರಿಗೆ ಆದೇಶಿಸಿದನು. ಆದ್ದರಿಂದ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ? ನಾವು ಇರುವ ಸ್ಥಿತಿಯನ್ನು ನೀವು ನೋಡುತ್ತಿಲ್ಲವೇ?' ಆಗ ಆದಮ್ ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ಅವನು ನನ್ನನ್ನು ಒಂದು ಮರದಿಂದ ತಡೆದಿದ್ದನು. ಆದರೆ ನಾನು ಅವನಿಗೆ ಅವಿಧೇಯತೆ ತೋರಿದೆ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ನೂಹ್‌ರ ಬಳಿಗೆ ಹೋಗಿ.' ಆಗ ಅವರು ನೂಹ್‌ರ ಬಳಿಗೆ ಬಂದು ಹೇಳುವರು: 'ಓ ನೂಹ್, ನೀವು ಭೂಮಿಯ ನಿವಾಸಿಗಳಿಗೆ ಕಳುಹಿಸಲ್ಪಟ್ಟ ಮೊದಲ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ನಿಮ್ಮನ್ನು ಕೃತಜ್ಞ ದಾಸ ಎಂದು ಕರೆದಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನನಗೆ ಒಂದು ಪ್ರಾರ್ಥನೆ ಇತ್ತು, ಅದನ್ನು ನಾನು ನನ್ನ ಜನರ ವಿರುದ್ಧ ಬಳಸಿದೆ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಇಬ್ರಾಹೀಮ್‌ರ ಬಳಿಗೆ ಹೋಗಿ.' ಆಗ ಅವರು ಇಬ್ರಾಹೀಮ್‌ರ ಬಳಿಗೆ ಬಂದು ಹೇಳುವರು: 'ಓ ಇಬ್ರಾಹೀಮ್, ನೀವು ಅಲ್ಲಾಹನ ಪ್ರವಾದಿ ಮತ್ತು ಭೂಮಿಯ ನಿವಾಸಿಗಳಲ್ಲಿ ಅವನ ಆತ್ಮೀಯ ಸ್ನೇಹಿತರಾಗಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಮೂರು ಸುಳ್ಳುಗಳನ್ನು ಹೇಳಿದ್ದೆನು. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮೂಸಾರ ಬಳಿಗೆ ಹೋಗಿ.' ಆಗ ಅವರು ಮೂಸಾರ ಬಳಿಗೆ ಬಂದು ಹೇಳುವರು: 'ಓ ಮೂಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ತನ್ನ ಸಂದೇಶದಿಂದ ಮತ್ತು ತನ್ನ ಮಾತಿನಿಂದ ನಿಮ್ಮನ್ನು ಜನರಿಗಿಂತ ಶ್ರೇಷ್ಠರನ್ನಾಗಿ ಮಾಡಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಒಬ್ಬ ವ್ಯಕ್ತಿಯನ್ನು ಕೊಂದಿದ್ದೆ. ಅವನನ್ನು ಕೊಲ್ಲಲು ನನಗೆ ಆದೇಶಿಸಲಾಗಿರಲಿಲ್ಲ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮರ್ಯಮ್‌ರ ಮಗ ಈಸಾರ ಬಳಿಗೆ ಹೋಗಿ.' ಆಗ ಅವರು ಈಸಾರ ಬಳಿಗೆ ಬಂದು ಹೇಳುವರು: 'ಓ ಈಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅವನು ಮರ್ಯಮ್‌ಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಆತ್ಮವಾಗಿದ್ದೀರಿ. ನೀವು ತೊಟ್ಟಿಲಲ್ಲಿ ಮಗುವಾಗಿದ್ದಾಗ ಜನರೊಂದಿಗೆ ಮಾತನಾಡಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಈಸಾ ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ.' ಆದರೆ, ಅವರು ಯಾವುದೇ ಪಾಪವನ್ನು ಹೇಳಲಿಲ್ಲ. 'ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮುಹಮ್ಮದ್‌ರ ಬಳಿಗೆ ಹೋಗಿ.' ಆಗ ಅವರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: 'ಓ ಮುಹಮ್ಮದ್, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಮತ್ತು ಪ್ರವಾದಿಗಳ ಮುದ್ರೆಯಾಗಿದ್ದೀರಿ. ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ನಾನು ಹೊರಟು ಅರ್ಶ್‌ನ ಕೆಳಗೆ ಬಂದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡುವೆನು. ನಂತರ ಅಲ್ಲಾಹು ತನ್ನ ಸ್ತುತಿಗಳು ಮತ್ತು ಉತ್ತಮ ಪ್ರಶಂಸೆಗಳಲ್ಲಿ ಕೆಲವನ್ನು ನನಗೆ ತೆರೆದುಕೊಡುವನು. ಅದನ್ನು ನನ್ನ ಮೊದಲು ಯಾರಿಗೂ ತೆರೆದುಕೊಡಲಾಗಿರಲಿಲ್ಲ. ನಂತರ ಹೀಗೆ ಹೇಳಲಾಗುವುದು: 'ಓ ಮುಹಮ್ಮದ್, ನಿಮ್ಮ ತಲೆಯನ್ನು ಎತ್ತಿರಿ, ಕೇಳಿರಿ, ನಿಮಗೆ ನೀಡಲಾಗುವುದು, ಶಿಫಾರಸ್ಸು ಮಾಡಿರಿ, ನಿಮ್ಮ ಶಿಫಾರಸ್ಸನ್ನು ಸ್ವೀಕರಿಸಲಾಗುವುದು.' ಆಗ ನಾನು ನನ್ನ ತಲೆಯನ್ನು ಎತ್ತಿ ಹೇಳುವೆನು: 'ಓ ನನ್ನ ಪರಿಪಾಲಕನೇ, ನನ್ನ ಸಮುದಾಯ, ನನ್ನ ಸಮುದಾಯ, ನನ್ನ ಸಮುದಾಯ.' ಆಗ ಹೇಳಲಾಗುವುದು: 'ಓ ಮುಹಮ್ಮದ್, ನಿಮ್ಮ ಸಮುದಾಯದಲ್ಲಿ ಯಾರಿಗೆ ವಿಚಾರಣೆಯಿಲ್ಲವೋ ಅವರನ್ನು ಸ್ವರ್ಗದ ಬಲ ಬಾಗಿಲಿನಿಂದ ಒಳಗೆ ಸೇರಿಸಿರಿ. ಇತರ ಬಾಗಿಲುಗಳಲ್ಲಿ ಅವರು ಇತರ ಜನರೊಂದಿಗೆ ಭಾಗಿಗಳಾಗುವರು.' ನಂತರ ಪ್ರವಾದಿಯವರು ಹೇಳಿದರು: 'ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಸ್ವರ್ಗದ ಬಾಗಿಲುಗಳ ಎರಡು ಕಡೆಗಳ ನಡುವಿನ ಅಂತರವು ಮಕ್ಕಾ ಮತ್ತು ಹಿಮ್ಯರ್‌ನ ನಡುವಿನ ಅಂತರದಷ್ಟಿದೆ ಅಥವಾ ಮಕ್ಕಾ ಮತ್ತು ಬುಸ್ರಾದ ನಡುವಿನ ಅಂತರದಷ್ಟಿದೆ.'"
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾರು ತನ್ನ ಸಹೋದರನಿಗೆ ಅವನ ಗೌರವಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೇ ವಿಷಯದಲ್ಲಿ ಅನ್ಯಾಯ ಮಾಡಿದ್ದಾನೋ, ಅವನು ಇಂದೇ, ಅದನ್ನು ಅವನಿಂದ ಪರಿಹರಿಸಿಕೊಳ್ಳಲಿ. (ಅಂದರೆ) ಯಾವ ದಿನ ದೀನಾರ್ (ಚಿನ್ನದ ನಾಣ್ಯ) ಮತ್ತು ದಿರ್ಹಮ್ (ಬೆಳ್ಳಿಯ ನಾಣ್ಯ) ಗಳು ಇರುವುದಿಲ್ಲವೋ ಆ ದಿನ ಬರುವ ಮೊದಲು. (ಏಕೆಂದರೆ, ಆ ದಿನ) ಒಂದು ವೇಳೆ ಅವನ ಬಳಿ ಸತ್ಕರ್ಮಗಳಿದ್ದರೆ, ಅವನ ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅವನಿಂದ ತೆಗೆದುಕೊಳ್ಳಲಾಗುವುದು. ಇನ್ನು ಒಂದು ವೇಳೆ ಅವನ ಬಳಿ ಸತ್ಕರ್ಮಗಳು ಇಲ್ಲದಿದ್ದರೆ, ಅವನ ಸಂಗಡಿಗನ (ಅನ್ಯಾಯಕ್ಕೊಳಗಾದವನ) ಪಾಪಗಳಿಂದ (ಕೆಲವನ್ನು) ತೆಗೆದು ಅವನ ಮೇಲೆ ಹೇರಲಾಗುವುದು".
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನ ಅತ್ಯಂತ ಕೆಳಮಟ್ಟದ ಸ್ಥಾನವು (ಹೇಗಿರುತ್ತದೆ) ಎಂದರೆ, ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಏನಾದರೂ ಇಚ್ಚಿಸು!'. ಆಗ ಅವನು ಇಚ್ಚಿಸುತ್ತಾನೆ, ಮತ್ತು ಇಚ್ಚಿಸುತ್ತಾನೆ (ಇಚ್ಚಿಸುತ್ತಲೇ ಇರುತ್ತಾನೆ). ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: 'ನೀನು (ಎಲ್ಲವನ್ನೂ) ಇಚ್ಚಿಸಿದೆಯಾ?'. ಅವನು ಹೇಳುತ್ತಾನೆ: 'ಹೌದು'. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)' ".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು. ನಂತರ ಅವನ ಪಾರ್ಶ್ವ, ಹಣೆ ಮತ್ತು ಬೆನ್ನುಗಳಿಗೆ ಅದರಿಂದ ಬರೆ ಹಾಕಲಾಗುವುದು. ಅವು ತಣ್ಣಗಾದಾಗಲೆಲ್ಲಾ ಅದನ್ನು ಪುನಃ ಕಾಯಿಸಲಾಗುವುದು. ಐವತ್ತು ಸಾವಿರ ವರ್ಷಗಳಷ್ಟು ದೀರ್ಘವಾದ ದಿನದಂದು ಅಲ್ಲಾಹು ಅವನ ದಾಸರ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಇದು ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗಕ್ಕೆ ಅಥವಾ ನರಕಕ್ಕೆ ಅವನ ದಾರಿಯನ್ನು ಕಂಡುಕೊಳ್ಳುವನು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?" ಅವರು (ಸ್ವಹಾಬಗಳು) ಹೇಳಿದರು: "ನಮ್ಮಲ್ಲಿ ದಿವಾಳಿ ಯಾರೆಂದರೆ ಹಣ ಅಥವಾ ಸಾಮಾನುಗಳು ಇಲ್ಲದವನು." ಅವರು ಹೇಳಿದರು: "ಖಂಡಿತವಾಗಿಯೂ, ನನ್ನ ಸಮುದಾಯದಲ್ಲಿ ದಿವಾಳಿ ಯಾರೆಂದರೆ, ಪುನರುತ್ಥಾನದ ದಿನದಂದು ನಮಾಝ್, ಉಪವಾಸ ಮತ್ತು ಝಕಾತ್‌ಗಳೊಂದಿಗೆ ಬರುವವನು. ಆದರೆ, ಅದೇ ಸಮಯ ಅವನು ಇತರರನ್ನು ನಿಂದಿಸಿ, ಇತರರ ಮೇಲೆ ಸುಳ್ಳಾರೋಪ ಹೊರಿಸಿ, ಇತರರ ರಕ್ತ ಚೆಲ್ಲಿ ಮತ್ತು ಇತರರಿಗೆ ಥಳಿಸಿದಂತಹ ಪಾಪಗಳೊಂದಿಗೂ ಬರುತ್ತಾನೆ. ಆಗ ಅವನ ಸತ್ಕರ್ಮಗಳಿಂದ ಕೆಲವನ್ನು ನೀಡಿ ಅವರಿಗೆ ನ್ಯಾಯ ಒದಗಿಸಲಾಗುವುದು. ಅವರೆಲ್ಲರಿಗೂ ನ್ಯಾಯ ಒದಗಿಸುವ ಮೊದಲೇ ಇವನ ಸತ್ಕರ್ಮಗಳು ಮುಗಿದು ಬಿಟ್ಟರೆ, ಅವರ ಕೆಲವು ಪಾಪಗಳನ್ನು ತೆಗೆದು ಇವನ ಮೇಲೆ ಹೊರಿಸಲಾಗುವುದು. ನಂತರ ಅವನನ್ನು ನರಕಕ್ಕೆ ಎಸೆಯಲಾಗುವುದು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.