Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 14 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಗುತ್ತದೆ. ಆಗ ನಾನು ಹೇಳುತ್ತೇನೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು." ಆಗ ನನ್ನೊಂದಿಗೆ ಹೇಳಲಾಗುತ್ತದೆ: "ನಿಮ್ಮ ನಂತರ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ? ಅಲ್ಲಾಹನಾಣೆ! ಅವರು ಬಹಳ ಬೇಗ ತಮ್ಮ ಹಿಮ್ಮಡಿಗಳಲ್ಲಿ ಮರಳಿಹೋಗಿದ್ದರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಓ ಬಿಲಾಲ್, ಇಸ್ಲಾಮಿನಲ್ಲಿ ನೀನು ಮಾಡಿದ ಕಾರ್ಯಗಳಲ್ಲಿ, ನೀನು ಅತಿ ಹೆಚ್ಚು ನಿರೀಕ್ಷೆ (ಭರವಸೆ) ಇಟ್ಟಿರುವ ಕಾರ್ಯ ಯಾವುದು ಎಂದು ನನಗೆ ಹೇಳು. ಏಕೆಂದರೆ, ನಾನು ಸ್ವರ್ಗದಲ್ಲಿ ನನ್ನ ಮುಂದೆ ನಿನ್ನ ಚಪ್ಪಲಿಗಳ ಸದ್ದು (ಹೆಜ್ಜೆಗುರುತಿನ ಶಬ್ದ) ಕೇಳಿದೆನು." ಅವರು (ಬಿಲಾಲ್) ಹೇಳಿದರು: "ನಾನು ರಾತ್ರಿ ಅಥವಾ ಹಗಲಿನ ಯಾವುದೇ ಸಮಯದಲ್ಲಿ ಶುದ್ಧೀಕರಣ (ವುಧೂ) ಮಾಡಿದಾಗಲೆಲ್ಲಾ, ಆ ಶುದ್ಧೀಕರಣದೊಂದಿಗೆ ನನಗೆ ವಿಧಿಸಲಾದಷ್ಟು (ನನ್ನ ಹಣೆಬರಹದಲ್ಲಿ ಬರೆದಷ್ಟು) ನಮಾಝ್ ನಿರ್ವಹಿಸದೇ ಬಿಟ್ಟಿಲ್ಲ. ಇದನ್ನೇ ನಾನು (ನನ್ನ ಕಾರ್ಯಗಳಲ್ಲಿ) ಅತಿ ಹೆಚ್ಚು ನಿರೀಕ್ಷೆಯುಳ್ಳ ಕಾರ್ಯವೆಂದು ಭಾವಿಸುತ್ತೇನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಿಶ್ಚಯವಾಗಿಯೂ, ಒಳಿತಿನ ವಿಷಯದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗೆ ಅನ್ಯಾಯ ಮಾಡುವುದಿಲ್ಲ. ಒಳಿತು ಮಾಡಿದ್ದಕ್ಕಾಗಿ ಅವನಿಗೆ ಇಹಲೋಕದಲ್ಲಿ (ಜೀವನೋಪಾಯವನ್ನು) ನೀಡಲಾಗುತ್ತದೆ ಮತ್ತು ಪರಲೋಕದಲ್ಲೂ ಪ್ರತಿಫಲ ನೀಡಲಾಗುತ್ತದೆ. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಅಲ್ಲಾಹನ ಸಂಪ್ರೀತಿಗಾಗಿ ಮಾಡಿದ ಒಳಿತುಗಳಿಗಾಗಿ ಅವನಿಗೆ ಆಹಾರವನ್ನು ನೀಡಲಾಗುವುದು. ಹೀಗೆ ಅವನು ಪರಲೋಕಕ್ಕೆ ತಲುಪಿದಾಗ, ಪ್ರತಿಫಲ ನೀಡಲಾಗುವ ಯಾವುದೇ ಒಳಿತುಗಳು ಅವನಲ್ಲಿ ಉಳಿದಿರುವುದಿಲ್ಲ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪು ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತಾರೆ (ಅಷ್ಟು ಪ್ರಕಾಶಮಾನವಾಗಿರುತ್ತಾರೆ). ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ. ಅವರು (ಸ್ವರ್ಗವಾಸಿಗಳು) ಮೂತ್ರ ವಿಸರ್ಜಿಸುವುದಿಲ್ಲ, ಮಲ ವಿಸರ್ಜಿಸುವುದಿಲ್ಲ, ಉಗುಳುವುದಿಲ್ಲ, ಮತ್ತು ಮೂಗಿನ ಸಿಂಬಳವನ್ನು ಹೊರಹಾಕುವುದಿಲ್ಲ. ಅವರ ಬಾಚಣಿಗೆಗಳು ಚಿನ್ನದ್ದಾಗಿರುತ್ತವೆ, ಅವರ ಬೆವರು ಕಸ್ತೂರಿಯ (ಸುವಾಸನೆಯಂತೆ) ಇರುತ್ತದೆ, ಅವರ ಧೂಪದಾನಿಗಳು ಊದ್ - ಸುವಾಸಿತ ಮರದಿಂದ ಕೂಡಿರುತ್ತವೆ. ಅವರ ಸಂಗಾತಿಗಳು 'ಹೂರ್' (ಅಪ್ಸರೆ) ಆಗಿರುತ್ತಾರೆ. ಅವರೆಲ್ಲರೂ ಒಂದೇ ಆಕೃತಿಯಲ್ಲಿ, ತಮ್ಮ ತಂದೆ ಆದಮ್ (ಅವರ ಮೇಲೆ ಶಾಂತಿಯಿರಲಿ) ರ ರೂಪದಲ್ಲಿ, ಅರವತ್ತು ಮೊಳ ಎತ್ತರವಾಗಿರುತ್ತಾರೆ".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಾನು ಪುನರುತ್ಥಾನ ದಿನದಂದು ಮನುಷ್ಯರ ಸರದಾರನಾಗಿರುವೆನು. ಅದು ಏಕೆ ಎಂದು ನಿಮಗೆ ತಿಳಿದಿದೆಯೇ? ಅಲ್ಲಾಹು ಮೊದಲಿನಿಂದ ಕೊನೆಯವರೆಗಿನ ಎಲ್ಲಾ ಜನರನ್ನು ಒಂದೇ ಮೈದಾನದಲ್ಲಿ ಒಟ್ಟುಗೂಡಿಸುವನು. ಕರೆಯುವವನ ಧ್ವನಿ ಅವರೆಲ್ಲರಿಗೂ ಕೇಳಿಸುವುದು ಮತ್ತು ದೃಷ್ಟಿಯು ಎಲ್ಲರನ್ನೂ ವ್ಯಾಪಿಸುವುದು. ಸೂರ್ಯನು ಸಮೀಪಕ್ಕೆ ಬರುವನು. ಜನರು ತಾಳಲಾರದಷ್ಟು ಮತ್ತು ಸಹಿಸಲಾಗದಷ್ಟು ದುಃಖ ಮತ್ತು ಸಂಕಟವನ್ನು ಅನುಭವಿಸುವರು. ಆಗ ಜನರು ಹೇಳುವರು: 'ನಿಮಗೆ ಏನಾಗಿದೆ, ನಿಮಗೆ ಕಾಣುತ್ತಿಲ್ಲವೇ? ನಿಮ್ಮ ಪರವಾಗಿ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಶಿಫಾರಸು ಮಾಡುವವರನ್ನು ನೀವು ಹುಡುಕುವುದಿಲ್ಲವೇ?' ಆಗ ಕೆಲವರು ಇತರರಿಗೆ ಹೇಳುವರು: 'ಆದಮ್‌ರ ಬಳಿಗೆ ಹೋಗಿರಿ.' ಆಗ ಅವರು ಆದಮ್ (ಅವರ ಮೇಲೆ ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: 'ನೀವು ಮನುಷ್ಯರ ತಂದೆಯಾಗಿದ್ದೀರಿ, ಅಲ್ಲಾಹು ನಿಮ್ಮನ್ನು ಅವನ ಕೈಯಿಂದ ಸೃಷ್ಟಿಸಿದನು, ಅವನ ಆತ್ಮದಿಂದ ನಿಮ್ಮಲ್ಲಿ ಊದಿದನು ಮತ್ತು ನಿಮಗೆ ಸಾಷ್ಟಾಂಗ ಮಾಡಲು ದೇವದೂತರಿಗೆ ಆದೇಶಿಸಿದನು. ಆದ್ದರಿಂದ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ? ನಾವು ಇರುವ ಸ್ಥಿತಿಯನ್ನು ನೀವು ನೋಡುತ್ತಿಲ್ಲವೇ?' ಆಗ ಆದಮ್ ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ಅವನು ನನ್ನನ್ನು ಒಂದು ಮರದಿಂದ ತಡೆದಿದ್ದನು. ಆದರೆ ನಾನು ಅವನಿಗೆ ಅವಿಧೇಯತೆ ತೋರಿದೆ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ನೂಹ್‌ರ ಬಳಿಗೆ ಹೋಗಿ.' ಆಗ ಅವರು ನೂಹ್‌ರ ಬಳಿಗೆ ಬಂದು ಹೇಳುವರು: 'ಓ ನೂಹ್, ನೀವು ಭೂಮಿಯ ನಿವಾಸಿಗಳಿಗೆ ಕಳುಹಿಸಲ್ಪಟ್ಟ ಮೊದಲ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ನಿಮ್ಮನ್ನು ಕೃತಜ್ಞ ದಾಸ ಎಂದು ಕರೆದಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನನಗೆ ಒಂದು ಪ್ರಾರ್ಥನೆ ಇತ್ತು, ಅದನ್ನು ನಾನು ನನ್ನ ಜನರ ವಿರುದ್ಧ ಬಳಸಿದೆ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಇಬ್ರಾಹೀಮ್‌ರ ಬಳಿಗೆ ಹೋಗಿ.' ಆಗ ಅವರು ಇಬ್ರಾಹೀಮ್‌ರ ಬಳಿಗೆ ಬಂದು ಹೇಳುವರು: 'ಓ ಇಬ್ರಾಹೀಮ್, ನೀವು ಅಲ್ಲಾಹನ ಪ್ರವಾದಿ ಮತ್ತು ಭೂಮಿಯ ನಿವಾಸಿಗಳಲ್ಲಿ ಅವನ ಆತ್ಮೀಯ ಸ್ನೇಹಿತರಾಗಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಮೂರು ಸುಳ್ಳುಗಳನ್ನು ಹೇಳಿದ್ದೆನು. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮೂಸಾರ ಬಳಿಗೆ ಹೋಗಿ.' ಆಗ ಅವರು ಮೂಸಾರ ಬಳಿಗೆ ಬಂದು ಹೇಳುವರು: 'ಓ ಮೂಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ತನ್ನ ಸಂದೇಶದಿಂದ ಮತ್ತು ತನ್ನ ಮಾತಿನಿಂದ ನಿಮ್ಮನ್ನು ಜನರಿಗಿಂತ ಶ್ರೇಷ್ಠರನ್ನಾಗಿ ಮಾಡಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಒಬ್ಬ ವ್ಯಕ್ತಿಯನ್ನು ಕೊಂದಿದ್ದೆ. ಅವನನ್ನು ಕೊಲ್ಲಲು ನನಗೆ ಆದೇಶಿಸಲಾಗಿರಲಿಲ್ಲ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮರ್ಯಮ್‌ರ ಮಗ ಈಸಾರ ಬಳಿಗೆ ಹೋಗಿ.' ಆಗ ಅವರು ಈಸಾರ ಬಳಿಗೆ ಬಂದು ಹೇಳುವರು: 'ಓ ಈಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅವನು ಮರ್ಯಮ್‌ಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಆತ್ಮವಾಗಿದ್ದೀರಿ. ನೀವು ತೊಟ್ಟಿಲಲ್ಲಿ ಮಗುವಾಗಿದ್ದಾಗ ಜನರೊಂದಿಗೆ ಮಾತನಾಡಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಈಸಾ ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ.' ಆದರೆ, ಅವರು ಯಾವುದೇ ಪಾಪವನ್ನು ಹೇಳಲಿಲ್ಲ. 'ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮುಹಮ್ಮದ್‌ರ ಬಳಿಗೆ ಹೋಗಿ.' ಆಗ ಅವರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: 'ಓ ಮುಹಮ್ಮದ್, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಮತ್ತು ಪ್ರವಾದಿಗಳ ಮುದ್ರೆಯಾಗಿದ್ದೀರಿ. ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ನಾನು ಹೊರಟು ಅರ್ಶ್‌ನ ಕೆಳಗೆ ಬಂದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡುವೆನು. ನಂತರ ಅಲ್ಲಾಹು ತನ್ನ ಸ್ತುತಿಗಳು ಮತ್ತು ಉತ್ತಮ ಪ್ರಶಂಸೆಗಳಲ್ಲಿ ಕೆಲವನ್ನು ನನಗೆ ತೆರೆದುಕೊಡುವನು. ಅದನ್ನು ನನ್ನ ಮೊದಲು ಯಾರಿಗೂ ತೆರೆದುಕೊಡಲಾಗಿರಲಿಲ್ಲ. ನಂತರ ಹೀಗೆ ಹೇಳಲಾಗುವುದು: 'ಓ ಮುಹಮ್ಮದ್, ನಿಮ್ಮ ತಲೆಯನ್ನು ಎತ್ತಿರಿ, ಕೇಳಿರಿ, ನಿಮಗೆ ನೀಡಲಾಗುವುದು, ಶಿಫಾರಸ್ಸು ಮಾಡಿರಿ, ನಿಮ್ಮ ಶಿಫಾರಸ್ಸನ್ನು ಸ್ವೀಕರಿಸಲಾಗುವುದು.' ಆಗ ನಾನು ನನ್ನ ತಲೆಯನ್ನು ಎತ್ತಿ ಹೇಳುವೆನು: 'ಓ ನನ್ನ ಪರಿಪಾಲಕನೇ, ನನ್ನ ಸಮುದಾಯ, ನನ್ನ ಸಮುದಾಯ, ನನ್ನ ಸಮುದಾಯ.' ಆಗ ಹೇಳಲಾಗುವುದು: 'ಓ ಮುಹಮ್ಮದ್, ನಿಮ್ಮ ಸಮುದಾಯದಲ್ಲಿ ಯಾರಿಗೆ ವಿಚಾರಣೆಯಿಲ್ಲವೋ ಅವರನ್ನು ಸ್ವರ್ಗದ ಬಲ ಬಾಗಿಲಿನಿಂದ ಒಳಗೆ ಸೇರಿಸಿರಿ. ಇತರ ಬಾಗಿಲುಗಳಲ್ಲಿ ಅವರು ಇತರ ಜನರೊಂದಿಗೆ ಭಾಗಿಗಳಾಗುವರು.' ನಂತರ ಪ್ರವಾದಿಯವರು ಹೇಳಿದರು: 'ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಸ್ವರ್ಗದ ಬಾಗಿಲುಗಳ ಎರಡು ಕಡೆಗಳ ನಡುವಿನ ಅಂತರವು ಮಕ್ಕಾ ಮತ್ತು ಹಿಮ್ಯರ್‌ನ ನಡುವಿನ ಅಂತರದಷ್ಟಿದೆ ಅಥವಾ ಮಕ್ಕಾ ಮತ್ತು ಬುಸ್ರಾದ ನಡುವಿನ ಅಂತರದಷ್ಟಿದೆ.'"
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಾನು ನಿಮಗೆ ಸ್ವರ್ಗದ ಜನರ ಬಗ್ಗೆ ತಿಳಿಸಲೇ? ದುರ್ಬಲ ಎಂದು ಪರಿಗಣಿಸಲ್ಪಡುವ ಎಲ್ಲಾ ವಿನಮ್ರ ವ್ಯಕ್ತಿಗಳು. ಅವರು (ಏನಾದರೂ ಸಂಭವಿಸಬೇಕೆಂದು) ಅಲ್ಲಾಹನ ಮೇಲೆ ಆಣೆ ಮಾಡಿದರೆ, ಅಲ್ಲಾಹು ಅದನ್ನು ನೆರವೇರಿಸುತ್ತಾನೆ. ನಾನು ನಿಮಗೆ ನರಕದ ಜನರ ಬಗ್ಗೆ ತಿಳಿಸಲೇ? ಎಲ್ಲಾ ಕಠೋರ, ದುರಾಸೆ ಮತ್ತು ಅಹಂಕಾರಿಗಳಾದ ವ್ಯಕ್ತಿಗಳು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.