Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 5 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ಎಚ್ಚರಾ! ಒರಗು ಕುರ್ಚಿಯಲ್ಲಿ ಕುಳಿತಿರುವ ಒಬ್ಬ ವ್ಯಕ್ತಿಗೆ ನಾನು ಹೇಳಿದ ಒಂದು ಹದೀಸ್ ತಲುಪುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ಬಳಿ ಅಲ್ಲಾಹನ ಗ್ರಂಥವಿದೆ. ಅದರಲ್ಲಿ ಏನು ಅನುಮತಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ ಅದನ್ನು ನಾವು ಧರ್ಮಸಮ್ಮತವೆಂದು ಪರಿಗಣಿಸುತ್ತೇವೆ., ಅದರಲ್ಲಿ ಏನು ನಿಷೇಧಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ಧರ್ಮನಿಷಿದ್ಧವೆಂದು ಪರಿಗಣಿಸುತ್ತೇವೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದೆಲ್ಲವೂ ಅಲ್ಲಾಹು ನಿಷೇಧಿಸಿದಂತೆಯೇ ಆಗಿದೆ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ. (ಪುನರುತ್ಥಾನ ದಿನದಂದು) ಹೇಳಲಾಗುವುದು: 'ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?'. ಹೀಗೆ ನಾವು ಕೊನೆಯವರು ಮತ್ತು (ವಿಚಾರಣೆಯಲ್ಲಿ) ಮೊದಲಿಗರಾಗಿದ್ದೇವೆ".
ಸಹೀಹ್ ಇದನ್ನು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡುವನು. ಪ್ರತಿಯೊಂದು ಸುರುಳಿಯೂ ದೃಷ್ಟಿ ತಲುಪುವಷ್ಟು ದೂರದವರೆಗೆ ಹರಡಿಕೊಂಡಿರುವುದು. ನಂತರ ಅವನು (ಅಲ್ಲಾಹು) ಕೇಳುವನು: "ಇವುಗಳಲ್ಲಿ ಯಾವುದನ್ನಾದರೂ ನೀನು ನಿರಾಕರಿಸುವೆಯಾ? ಕರ್ಮಗಳನ್ನು ದಾಖಲಿಸುವ ನನ್ನ ದೂತರು ನಿನಗೇನಾದರೂ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿನಗೆ ಹೇಳಲು ಏನಾದರೂ ನೆಪವಿದೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಅವನು ಹೇಳುವನು: "ನಿನ್ನ ತಕ್ಕಡಿಯನ್ನು ಇಲ್ಲಿಗೆ ತಾ." ಆ ವ್ಯಕ್ತಿ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಅಲ್ಲಾಹು ಹೇಳುವನು: "(ಹೆದರಬೇಡ), ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ಆ ಸುರಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳು ಹಗುರವಾಗಿ ಚೀಟಿ ಭಾರವಾಗುವುದು. ಅಲ್ಲಾಹನ ಹೆಸರಿಗಿಂತಲೂ ಹೆಚ್ಚು ಭಾರವಾದದ್ದು ಯಾವುದೂ ಇಲ್ಲ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು." [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."
ಹಸನ್. ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು ಹೊರಟುಹೋಗುವ ಸಮಯದಲ್ಲಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಜ್ಞಾನವು ಹೊರಟುಹೋಗುವುದು ಹೇಗೆ? ನಾವಂತೂ ಕುರ್‌ಆನ್ ಪಠಿಸುತ್ತೇವೆ ಮತ್ತು ನಮ್ಮ ಮಕ್ಕಳಿಗೆ ಪಠಿಸಲು ಕಲಿಸುತ್ತಿದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಿಗೆ ಅದರ ಪಠಣವನ್ನು ಕಲಿಸುತ್ತಾರೆ ಹೀಗೆ ಪುನರುತ್ಥಾನ ದಿನದ ತನಕ ನಡೆಯುತ್ತದೆಯಲ್ಲವೇ?" ಅವರು ಹೇಳಿದರು: "ತಮ್ಮ ತಾಯಿ ತಮ್ಮನ್ನು ಕಳೆದುಕೊಳ್ಳಲಿ. ಓ ಝಿಯಾದ್! ನಾನು ತಮ್ಮನ್ನು ಮದೀನದಲ್ಲಿ ಅತ್ಯಧಿಕ ಪಾಂಡಿತ್ಯವಿರುವ ವ್ಯಕ್ತಿ ಎಂದು ಭಾವಿಸಿದ್ದೆ. ಈ ಯಹೂದಿಗಳು ಮತ್ತು ಕ್ರೈಸ್ತರು ತೌರಾತ್ ಮತ್ತು ಇಂಜೀಲನ್ನು ಪಠಿಸುವುದಿಲ್ಲವೇ? ಆದರೆ ಅವರು ಅದರಲ್ಲಿರುವಂತೆ ಅನುಸರಿಸುತ್ತಿರುವರೇ?"
ಸಹೀಹ್ ಲಿಗೈರಿಹಿ (ಇತರ ವರದಿಗಳಿಂದಾಗಿ ಸಹೀಹ್). ಇದನ್ನು ಇಬ್ನ್ ಮಾಜ ವರದಿ ಮಾಡಿದ್ದಾರೆ.