Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 38 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ನಿಮ್ಮ ವಸ್ತ್ರಗಳಲ್ಲಿ ಬಿಳಿ ಬಣ್ಣವಿರುವವುಗಳನ್ನು ಧರಿಸಿರಿ. ಖಂಡಿತವಾಗಿಯೂ ಅವು ನಿಮ್ಮ ವಸ್ತ್ರಗಳಲ್ಲಿ ಅತ್ಯುತ್ತಮವಾದವುಗಳು. ನಿಮ್ಮ ಮೃತರನ್ನು ಅವುಗಳಲ್ಲಿ (ಬಿಳಿ ವಸ್ತ್ರಗಳಲ್ಲಿ) ಕಫನ್ ಮಾಡಿರಿ".
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟರೆ, ಅವನು ಹಕ್ಕಿಗಳಿಗೆ ಆಹಾರ ನೀಡುವಂತೆ ನಿಮಗೂ ಆಹಾರ ನೀಡುವನು. ಅವು ಬೆಳಗ್ಗೆ ಖಾಲಿ ಹೊಟ್ಟೆಯಿಂದ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ."
ಸಹೀಹ್ ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ, ನಿಮ್ಮ ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಿರಿ, ನಿಮ್ಮ (ರಮದಾನ್) ತಿಂಗಳಲ್ಲಿ ಉಪವಾಸ ಆಚರಿಸಿರಿ, ನಿಮ್ಮ ಸಂಪತ್ತಿನ ಝಕಾತನ್ನು ನೀಡಿರಿ ಮತ್ತು ನಿಮ್ಮ ಆಡಳಿತಗಾರರನ್ನು ಅನುಸರಿಸಿರಿ. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ವರ್ಗವನ್ನು ಪ್ರವೇಶಿಸುವಿರಿ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡುವನು. ಪ್ರತಿಯೊಂದು ಸುರುಳಿಯೂ ದೃಷ್ಟಿ ತಲುಪುವಷ್ಟು ದೂರದವರೆಗೆ ಹರಡಿಕೊಂಡಿರುವುದು. ನಂತರ ಅವನು (ಅಲ್ಲಾಹು) ಕೇಳುವನು: "ಇವುಗಳಲ್ಲಿ ಯಾವುದನ್ನಾದರೂ ನೀನು ನಿರಾಕರಿಸುವೆಯಾ? ಕರ್ಮಗಳನ್ನು ದಾಖಲಿಸುವ ನನ್ನ ದೂತರು ನಿನಗೇನಾದರೂ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿನಗೆ ಹೇಳಲು ಏನಾದರೂ ನೆಪವಿದೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಅವನು ಹೇಳುವನು: "ನಿನ್ನ ತಕ್ಕಡಿಯನ್ನು ಇಲ್ಲಿಗೆ ತಾ." ಆ ವ್ಯಕ್ತಿ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಅಲ್ಲಾಹು ಹೇಳುವನು: "(ಹೆದರಬೇಡ), ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ಆ ಸುರಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳು ಹಗುರವಾಗಿ ಚೀಟಿ ಭಾರವಾಗುವುದು. ಅಲ್ಲಾಹನ ಹೆಸರಿಗಿಂತಲೂ ಹೆಚ್ಚು ಭಾರವಾದದ್ದು ಯಾವುದೂ ಇಲ್ಲ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿದ್ರಿಸಲು ಬಯಸಿದಾಗ, ತಮ್ಮ ಕೈಯನ್ನು ತಮ್ಮ ತಲೆಯ ಕೆಳಗೆ ಇಡುತ್ತಿದ್ದರು, ನಂತರ ಹೇಳುತ್ತಿದ್ದರು: "ಅಲ್ಲಾಹುಮ್ಮ ಖಿನೀ ಅಝಾಬಕ ಯೌಮ ತಜ್ಮಉ (ಅಥವಾ ತಬ್'ಅಸು) ಇಬಾದಕ್". (ಅರ್ಥ: ಓ ಅಲ್ಲಾಹನೇ, ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ - ಅಥವಾ ಎಬ್ಬಿಸುವ - ದಿನದಂದು ನಿನ್ನ ಶಿಕ್ಷೆಯಿಂದ ನನ್ನನ್ನು ಕಾಪಾಡು).
ಸಹೀಹ್ ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ಜನರು ಅತಿಹೆಚ್ಚಾಗಿ ಸ್ವರ್ಗವನ್ನು ಪ್ರವೇಶಿಸಲು ಕಾರಣವಾಗುವ ವಿಷಯದ ಬಗ್ಗೆ ಕೇಳಲಾದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: "ಅಲ್ಲಾಹನ ಭಯ ಮತ್ತು ಉತ್ತಮ ನಡವಳಿಕೆ." ಜನರು ಅತಿಹೆಚ್ಚಾಗಿ ನರಕವನ್ನು ಪ್ರವೇಶಿಸಲು ಕಾರಣವಾಗುವ ವಿಷಯದ ಬಗ್ಗೆ ಕೇಳಲಾದಾಗ, ಅವರು ಹೀಗೆ ಉತ್ತರಿಸಿದರು: "ಬಾಯಿ ಮತ್ತು ಗುಹ್ಯಾಂಗ."
ಹಸನ್ ಸಹೀಹ್. ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಆರಾಧಕನ ಮೇಲೆ ವಿದ್ವಾಂಸನ ಶ್ರೇಷ್ಠತೆಯು ನಿಮ್ಮಲ್ಲಿ ಅತ್ಯಂತ ಕೆಳಗಿನ ಸ್ಥಾನಮಾನವಿರುವವನ ಮೇಲೆ ನನ್ನ ಶ್ರೇಷ್ಠತೆಯಷ್ಟಿದೆ". ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು, ಅವನ ದೇವದೂತರು, ಆಕಾಶಗಳು ಮತ್ತು ಭೂಮಿಗಳ ನಿವಾಸಿಗಳು, ತನ್ನ ಬಿಲದಲ್ಲಿರುವ ಇರುವೆಯೂ ಸಹ ಮತ್ತು ಮೀನುಗಳೂ ಸಹ, ಜನರಿಗೆ ಒಳಿತನ್ನು ಕಲಿಸುವವನಿಗಾಗಿ ಪ್ರಾರ್ಥಿಸುತ್ತಾರೆ".
ಹಸನ್ ಲಿಗೈರಿಹಿ (ಇತರ ವರದಿಗಳಿಂದಾಗಿ ಹಸನ್). ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.