Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 33 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್‌ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ, ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಅಥವಾ ಹೆಣ್ಣು ಕರುವನ್ನು (ಒಂದು ವರ್ಷ ಪ್ರಾಯದ್ದು), ಮತ್ತು ಪ್ರತಿ ನಲ್ವತ್ತು ಹಸುಗಳಿಗೆ ಒಂದು ಹಸುವನ್ನು (ಎರಡು ವರ್ಷ ಪ್ರಾಯದ್ದು) ತೆಗೆದುಕೊಳ್ಳಲು ಆದೇಶಿಸಿದರು. ಮತ್ತು (ತೆರಿಗೆಯ ವಿಷಯದಲ್ಲಿ) ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದವನಿಂದ ಒಂದು ದೀನಾರ್, ಅಥವಾ ಅದಕ್ಕೆ ಸಮನಾದ ಮೌಲ್ಯದ ಯಮನ್‌ನ ಬಟ್ಟೆಯಾದ 'ಮಆಫಿರ್' ಅನ್ನು ತೆಗೆದುಕೊಳ್ಳಲು ಆದೇಶಿಸಿದರು.
ಇತರ ಸಾಕ್ಷಿ ಹದೀಸ್‌ಗಳ ಆಧಾರದಿಂದ ಸಹೀಹ್. ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರಿಗೆ ಇಬ್ಬರು ಪತ್ನಿಯರಿದ್ದು ಅವನು ಅವರಲ್ಲಿ ಒಬ್ಬಳ ಕಡೆಗೆ ವಾಲಿದರೆ, ಪುನರುತ್ಥಾನ ದಿನದಂದು ಅವನು ಒಂದು ಪಾರ್ಶ್ವಕ್ಕೆ ವಾಲಿದವನಂತೆ ಬರುವನು."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು: "ನಿಶ್ಚಯವಾಗಿಯೂ ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ನಾವು ಅವನಲ್ಲಿ ಸಹಾಯ ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. "ಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು. ಅವರಿಬ್ಬರಿಂದ ಅನೇಕ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಬಗ್ಗೆ ನೀವು ಪರಸ್ಪರ ಕೇಳುತ್ತಿರುವಿರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧಗಳನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಲೇ ಇದ್ದಾನೆ." [ನಿಸಾಅ್‌ 1]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಮರಣಹೊಂದುವಂತಾಗದಿರಲಿ." [ಆಲು ಇಮ್ರಾನ್:102]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಆಡಿರಿ. ಅವನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಮಹಾ ವಿಜಯವನ್ನು ಪಡೆದನು." [ಅಹ್‌ಝಾಬ್:70-71].
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು.
ಸಹೀಹ್ ಇದನ್ನು ಅಬೂದಾವೂದ್, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ನಾನು ಸಫ್ವಾನ್ ಇಬ್ನ್ ಅಸ್ಸಾಲ್ ಅಲ್-ಮುರಾದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ, ಚರ್ಮದ ಪಾದರಕ್ಷೆಗಳ (ಖುಫ್ಫ್) ಮೇಲೆ ಒದ್ದೆ ಕೈಯಿಂದ ಸವರುವುದರ ಬಗ್ಗೆ ಕೇಳಲು ಬಂದೆನು. ಅವರು ಕೇಳಿದರು: "ಓ ಝಿರ್, ನೀನು ಇಲ್ಲಿಗೆ ಬರಲು ಕಾರಣವೇನು?". ನಾನು ಹೇಳಿದೆ: "ಜ್ಞಾನವನ್ನು ಅರಸಿ ಬಂದಿದ್ದೇನೆ". ಅವರು ಹೇಳಿದರು: "ಖಂಡಿತವಾಗಿಯೂ ಮಲಕ್‌ಗಳು (ದೇವದೂತರು) ಜ್ಞಾನವನ್ನು ಅರಸುವವನಿಗೆ, ಅವನು ಅರಸುವುದನ್ನು ಮೆಚ್ಚಿಕೊಂಡು ತಮ್ಮ ರೆಕ್ಕೆಗಳನ್ನು ತಗ್ಗಿಸುತ್ತಾರೆ". ನಾನು ಹೇಳಿದೆ: "ಮಲಮೂತ್ರ ವಿಸರ್ಜನೆಯ ನಂತರ 'ಖುಫ್ಫ್'ಗಳ ಮೇಲೆ ಸವರುವುದರ ಬಗ್ಗೆ ನನ್ನ ಮನಸ್ಸಿನಲ್ಲಿ ಸಂಶಯವುಂಟಾಗಿದೆ (ಅಥವಾ ತಿಳಿಯುವ ಕುತೂಹಲವುಂಟಾಗಿದೆ). ನೀವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಒಬ್ಬರಾಗಿದ್ದೀರಿ, ಆದ್ದರಿಂದ ನಾನು ನಿಮ್ಮಲ್ಲಿ ಕೇಳಲು ಬಂದಿದ್ದೇನೆ. ಅವರು ಆ ವಿಷಯದಲ್ಲಿ ಹೇಳುವುದನ್ನು ನೀವು ಕೇಳಿದ್ದೀರಾ?" ಅವರು ಹೇಳಿದರು: "ಹೌದು. ನಾವು ಪ್ರಯಾಣದಲ್ಲಿದ್ದಾಗ ಅಥವಾ ಪ್ರಯಾಣಿಕರಾಗಿದ್ದಾಗ, ಜನಾಬತ್ (ದೊಡ್ಡ ಅಶುದ್ಧಿ) ಹೊರತುಪಡಿಸಿ, ಮಲ, ಮೂತ್ರ ಮತ್ತು ನಿದ್ರೆಯಂತಹ (ಸಣ್ಣ ಅಶುದ್ಧಿ) ಗಳಿಗಾಗಿ ಮೂರು ಹಗಲು ಮತ್ತು ರಾತ್ರಿಗಳವರೆಗೆ (72 ತಾಸು) ನಮ್ಮ ಪಾದರಕ್ಷೆಗಳನ್ನು ಕಳಚಬಾರದೆಂದು ಅವರು ನಮಗೆ ಆದೇಶಿಸುತ್ತಿದ್ದರು". ನಾನು ಕೇಳಿದೆ: "ಸ್ವೇಚ್ಛೆಯ(ಹವಾ) ವಿಷಯದಲ್ಲಿ ಅವರು ಏನನ್ನಾದರೂ ಹೇಳುವುದನ್ನು ನೀವು ಕೇಳಿದ್ದೀರಾ?" ಅವರು ಹೇಳಿದರು: "ಹೌದು. ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದೆವು. ನಾವು ಅವರ ಬಳಿ ಇದ್ದಾಗ, ಒಬ್ಬ ಗ್ರಾಮೀಣ ವ್ಯಕ್ತಿ ಗಟ್ಟಿಯಾದ ಧ್ವನಿಯಲ್ಲಿ ಕೂಗುತ್ತಾ, 'ಓ ಮುಹಮ್ಮದ್!' ಎಂದು ಕರೆದನು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನ ಧ್ವನಿಯಂತೆಯೇ (ಗಟ್ಟಿಯಾಗಿ) ಉತ್ತರಿಸಿದರು: ‘ನಾನು ಇಲ್ಲಿದ್ದೇನೆ’. ನಾವು ಅವನಿಗೆ ಹೇಳಿದೆವು: 'ನಿನಗೆ ವಿನಾಶ ಕಾದಿದೆ! ನಿನ್ನ ಧ್ವನಿಯನ್ನು ತಗ್ಗಿಸು, ಏಕೆಂದರೆ ನೀನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೀಯಾ. ನಿನಗೆ ಹೀಗೆ ಮಾಡುವುದನ್ನು ನಿಷೇಧಿಸಲಾಗಿದೆ'. ಅವನು ಹೇಳಿದನು: 'ಅಲ್ಲಾಹನಾಣೆ, ನಾನು (ಧ್ವನಿಯನ್ನು) ತಗ್ಗಿಸುವುದಿಲ್ಲ'. (ನಂತರ) ಆ ಗ್ರಾಮೀಣ ವ್ಯಕ್ತಿ ಹೇಳಿದನು: 'ಒಬ್ಬ ವ್ಯಕ್ತಿಯು ಒಂದು ಜನಸಮುದಾಯವನ್ನು ಪ್ರೀತಿಸುತ್ತಾನೆ. ಆದರೆ (ಕರ್ಮಗಳಲ್ಲಿ) ಅವರನ್ನು ತಲುಪಲು ಅವನಿಗೆ ಸಾಧ್ಯವಾಗಿರುವುದಿಲ್ಲ (ಅವನ ಗತಿಯೇನು?)'. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಆ ವ್ಯಕ್ತಿಯು ಪುನರುತ್ಥಾನ ದಿನದಂದು ತಾನು ಪ್ರೀತಿಸಿದವರೊಂದಿಗೆ ಇರುತ್ತಾನೆ' ". (ಝಿರ್ ಹೇಳುತ್ತಾರೆ): ನಂತರ ಅವರು (ಸಫ್ವಾನ್) ಮಾತನಾಡುತ್ತಲೇ ಇದ್ದರು. ಕೊನೆಗೆ ಅವರು ಪಶ್ಚಿಮ ದಿಕ್ಕಿನ ಒಂದು ಬಾಗಿಲಿನ ಬಗ್ಗೆ ಉಲ್ಲೇಖಿಸಿದರು. ಅದರ ಅಗಲವು (ಅಥವಾ ಅದರ ಅಗಲದಲ್ಲಿ ಸವಾರನು ಪ್ರಯಾಣಿಸಿದರೆ) ನಲವತ್ತು ಅಥವಾ ಎಪ್ಪತ್ತು ವರ್ಷಗಳ ದಾರಿಯಷ್ಟಿದೆ.
ಸಹೀಹ್ ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಕಡಲಿನಲ್ಲಿ ಪ್ರಯಾಣ ಮಾಡುವವರು. ನಾವು ನಮ್ಮೊಂದಿಗೆ ಸ್ವಲ್ಪ ನೀರನ್ನು ಒಯ್ಯುತ್ತೇವೆ. ಆ ನೀರಿನಿಂದ ನಾವು ವುದೂ ನಿರ್ವಹಿಸಿದರೆ ನಮಗೆ ಕುಡಿಯಲು ನೀರು ಇರುವುದಿಲ್ಲ. ನಾವು ಸಮುದ್ರದ ನೀರಿನಿಂದ ವುದೂ ಮಾಡಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಾರೋ, ಅವರನ್ನು ಅಲ್ಲಾಹು ನರಕದಿಂದ ರಕ್ಷಿಸುತ್ತಾನೆ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.