Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 23 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸೈನ್ಯದ ತುಕಡಿಯನ್ನು ಕಳುಹಿಸಿ, ಅನ್ಸಾರ್‌ಗಳಲ್ಲಿ ಒಬ್ಬ ವ್ಯಕ್ತಿಯನ್ನು ಅದಕ್ಕೆ ನಾಯಕನನ್ನಾಗಿ ನೇಮಿಸಿದರು. ನಾಯಕನಿಗೆ ವಿಧೇಯವಾಗಿರಲು ಅವರಿಗೆ (ಸೈನಿಕರಿಗೆ) ಆದೇಶಿಸಿದರು. (ದಾರಿಯಲ್ಲಿ) ಅವನು ಕೋಪಗೊಂಡು ಕೇಳಿದನು: "ನನಗೆ ವಿಧೇಯರಾಗಿರಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಮಗೆ ಆದೇಶಿಸಿಲ್ಲವೇ?". ಅವರು ಹೇಳಿದರು: "ಖಂಡಿತವಾಗಿಯೂ (ಆದೇಶಿಸಿದ್ದಾರೆ)". ಅವನು ಹೇಳಿದನು: "ಹಾಗಾದರೆ ನನಗಾಗಿ ಸೌದೆಯನ್ನು ಸಂಗ್ರಹಿಸಿ ತನ್ನಿ". ಅವರು ಸಂಗ್ರಹಿಸಿ ತಂದರು. ಅವನು ಹೇಳಿದನು: "ಬೆಂಕಿಯನ್ನು ಹೊತ್ತಿಸಿ". ಅವರು ಅದನ್ನು ಹೊತ್ತಿಸಿದರು. ಅವನು ಹೇಳಿದನು: "ಅದರಲ್ಲಿ ಬೀಳಿರಿ". ಅವರು (ಅದನ್ನು ಮಾಡಲು) ಸಿದ್ಧರಾದರು. ಆದರೆ ಅವರಲ್ಲೊಬ್ಬರು ಇನ್ನೊಬ್ಬರನ್ನು ತಡೆದು ಹೇಳಿದರು: "ನಾವು ಬೆಂಕಿಯಿಂದ (ನರಕದಿಂದ) ಪಾರಾಗಲೆಂದೇ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಓಡಿ ಬಂದಿದ್ದೇವೆ (ಮತ್ತು ಈಗ ಇದರಲ್ಲೇಕೆ ಬೀಳಬೇಕು?)". ಬೆಂಕಿ ಆರುವವರೆಗೆ ಮತ್ತು ಅವನ ಕೋಪ ತಣ್ಣಗಾಗುವವರೆಗೆ ಅವರು ಹಾಗೆಯೇ ಇದ್ದರು. ಈ ವಿಷಯ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲುಪಿತು. ಅವರು ಹೇಳಿದರು: "ಒಂದು ವೇಳೆ ಅವರು ಅದರಲ್ಲಿ ಬಿದ್ದಿದ್ದರೆ, ಅವರು ಪುನರುತ್ಥಾನ ದಿನದವರೆಗೆ ಅದರಿಂದ ಹೊರಬರುತ್ತಿರಲಿಲ್ಲ. ವಿಧೇಯತೆಯಿರಬೇಕಾದುದು ಒಳಿತಿನ ವಿಷಯಗಳಲ್ಲಿ ಮಾತ್ರ".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಖಂಡಿತವಾಗಿಯೂ ಅಲ್ಲಾಹನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಸ್ರಾ (ಪರ್ಷಿಯಾದ ರಾಜ), ಕೈಸರ್ (ರೋಮ್‌ನ ರಾಜ), ನಜಾಶಿ (ಅಬಿಸೀನಿಯಾದ ರಾಜ) ಮತ್ತು ಪ್ರತಿಯೊಬ್ಬ 'ಜಬ್ಬಾರ್'ನಿಗೂ (ದಬ್ಬಾಳಿಕೆ ನಡೆಸುವ ಅರಸನಿಗೂ), ಅವರನ್ನು ಅಲ್ಲಾಹನ ಕಡೆಗೆ ಆಹ್ವಾನಿಸಿ ಪತ್ರ ಬರೆದರು. (ಆದರೆ ಇಲ್ಲಿ ಪ್ರಸ್ತಾಪಿಸಲಾದ) ನಜಾಶಿ, ಯಾರ ಮೇಲೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ (ಜನಾಝಾ) ನಿರ್ವಹಿಸಿದರೋ ಅವರಲ್ಲ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಒಂದು ದಿನದಲ್ಲಿ ಎರಡು ಹೊತ್ತಿನ ಊಟ ಮಾಡಿದ್ದರೆ, ಅದರಲ್ಲಿ ಒಂದು ಹೊತ್ತಿನ ಊಟ ಖಂಡಿತವಾಗಿಯೂ ಖರ್ಜೂರವಾಗಿರುತ್ತಿತ್ತು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಾಳೆ ನಾನು ಈ ಪತಾಕೆಯನ್ನು ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು. ಅವನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾನೆ ಮತ್ತು ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವನನ್ನು ಪ್ರೀತಿಸುತ್ತಾರೆ." ಪತಾಕೆ ಯಾರ ಕೈಗೆ ಕೊಡಲಾಗಬಹುದು ಎಂದು ಮಾತನಾಡುತ್ತಾ ಜನರು ಆ ರಾತ್ರಿಯನ್ನು ಕಳೆದರು. ಬೆಳಗಾದಾಗ, ಜನರೆಲ್ಲರೂ ಅದನ್ನು ತಮ್ಮ ಕೈಗೆ ಕೊಡಲಾಗಬಹುದೆಂಬ ನಿರೀಕ್ಷೆಯಿಂದ ಬೆಳಗ್ಗೆಯೇ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತೆರಳಿದರು. ಅವರು (ಪ್ರವಾದಿ) ಕೇಳಿದರು: "ಅಲೀ ಬಿನ್ ಅಬೂ ತಾಲಿಬ್ ಎಲ್ಲಿ?" ಅವರು ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಕಣ್ಣ ನೋವಿನಿಂದ ಬಳಲುತ್ತಿದ್ದಾರೆ." ಅವರು ಹೇಳಿದರು: "ಅವನ ಬಳಿಗೆ ಜನರನ್ನು ಕಳುಹಿಸಿ." ಅವರು ಬಂದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಎರಡು ಕಣ್ಣುಗಳಿಗೆ ಉಗಿದು ಪ್ರಾರ್ಥಿಸಿದರು. ಆಗ ಅವರ ಕಣ್ಣಿನಲ್ಲಿ ಯಾವುದೇ ನೋವಿರಲಿಲ್ಲವೋ ಎಂಬಂತೆ ಅದು ಗುಣವಾಯಿತು. ಅವರು ಪತಾಕೆಯನ್ನು ಅವರಿಗೆ ಕೊಟ್ಟರು. ಅಲಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ನಮ್ಮಂತೆ ಆಗುವ ತನಕ ನಾನು ಅವರೊಂದಿಗೆ ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಅವರ ಅಂಗಳವನ್ನು ತಲುಪುವ ತನಕ ಸಾವಧಾನದಿಂದ ಮುಂದುವರಿಯಿರಿ. ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಕರೆಯಿರಿ. ಅಲ್ಲಾಹನ ಹಕ್ಕಿಗೆ ಸಂಬಂಧಿಸಿದಂತೆ ಅವರಿಗೆ ಏನು ಕಡ್ಡಾಯವಾಗಿದೆಯೆಂಬುದನ್ನು ತಿಳಿಸಿಕೊಡಿ.ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಸಿಗೆಯು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು." ಮುಸ್ಲಿಮ್ ಅವರ ವರದಿಯಲ್ಲಿ (ಹೀಗಿದೆ): "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒರಗಿಕೊಳ್ಳುತ್ತಿದ್ದ ದಿಂಬು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯುತ್ತಮ ನಡವಳಿಕೆಯನ್ನು ಹೊಂದಿದವರಾಗಿದ್ದರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.