Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 24 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ತನ್ನ ಎರಡು ದವಡೆಗಳ ನಡುವೆ ಮತ್ತು ತನ್ನ ಎರಡು ಕಾಲುಗಳ ನಡುವೆ ಇರುವುದನ್ನು ನಿಯಂತ್ರಿಸುತ್ತೇನೆಂದು ಯಾರು ನನಗೆ ಖಾತ್ರಿ ನೀಡುತ್ತಾನೋ, ಅವನಿಗೆ ನಾನು ಸ್ವರ್ಗದ ಖಾತ್ರಿ ನೀಡುತ್ತೇನೆ."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
“ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ನರಕವನ್ನು ಪ್ರವೇಶಿಸುತ್ತಾನೆ.”
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನ ಅತ್ಯಂತ ಕೆಳಮಟ್ಟದ ಸ್ಥಾನವು (ಹೇಗಿರುತ್ತದೆ) ಎಂದರೆ, ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಏನಾದರೂ ಇಚ್ಚಿಸು!'. ಆಗ ಅವನು ಇಚ್ಚಿಸುತ್ತಾನೆ, ಮತ್ತು ಇಚ್ಚಿಸುತ್ತಾನೆ (ಇಚ್ಚಿಸುತ್ತಲೇ ಇರುತ್ತಾನೆ). ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: 'ನೀನು (ಎಲ್ಲವನ್ನೂ) ಇಚ್ಚಿಸಿದೆಯಾ?'. ಅವನು ಹೇಳುತ್ತಾನೆ: 'ಹೌದು'. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)' ".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಓ ಅಬೂ ಸಈದ್, ಯಾರು ಅಲ್ಲಾಹುವನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಪ್ರವಾದಿಯೆಂದು (ಒಪ್ಪಿಕೊಂಡು) ತೃಪ್ತರಾಗುತ್ತಾರೋ, ಅವರಿಗೆ ಸ್ವರ್ಗವು ಖಚಿತವಾಯಿತು". ಇದನ್ನು ಕೇಳಿ ಅಬೂ ಸಈದ್‌ಗೆ ಆಶ್ಚರ್ಯವಾಯಿತು. ಅವರು ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಇದನ್ನು ನನಗೆ ಮತ್ತೊಮ್ಮೆ ಹೇಳಿ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹಾಗೆಯೇ ಮಾಡಿದರು (ಮತ್ತೊಮ್ಮೆ ಹೇಳಿದರು). ನಂತರ ಹೇಳಿದರು: "ಮತ್ತು ಇನ್ನೊಂದು (ವಿಷಯ) ಇದೆ. ಅದರ ಮೂಲಕ ದಾಸನನ್ನು ಸ್ವರ್ಗದಲ್ಲಿ ನೂರು ಹಂತಗಳಷ್ಟು ಎತ್ತರಿಸಲಾಗುತ್ತದೆ. ಪ್ರತಿಯೆರಡು ಹಂತಗಳ ನಡುವಿನ ಅಂತರವು ಆಕಾಶ ಮತ್ತು ಭೂಮಿಯ ನಡುವಿನ ಅಂತರದಷ್ಟಿರುತ್ತದೆ". ಅಬೂ ಸಈದ್ ಕೇಳಿದರು: "ಅದು ಯಾವುದು, ಓ ಅಲ್ಲಾಹುವಿನ ಸಂದೇಶವಾಹಕರೇ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡುವುದು (ಶ್ರಮಿಸುವುದು/ಹೋರಾಡುವುದು), ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡುವುದು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನಾನು ನಿಮಗೆ ಇನ್ನೂ ಏನಾದರೂ ಹೆಚ್ಚಿಗೆ ಕೊಡಬೇಕೆಂದು ನೀವು ಬಯಸುತ್ತೀರಾ?" ಅವರು ಹೇಳುವರು: "ನೀನು ನಮ್ಮ ಮುಖಗಳನ್ನು ಬೆಳಗಿಸಲಿಲ್ಲವೇ? ನೀನು ನಮ್ಮನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಿಲ್ಲವೇ? ನೀನು ನಮ್ಮನ್ನು ನರಕದಿಂದ ಪಾರು ಮಾಡಲಿಲ್ಲವೇ?" ಆಗ ಅಲ್ಲಾಹು ಅವನ ಪರದೆಯನ್ನು ಸರಿಸುವನು. ಆಗ ಅವರಿಗೆ ನೀಡಲಾದ ಎಲ್ಲಾ ವಸ್ತುಗಳಲ್ಲಿ ಅವರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುವುದಕ್ಕಿಂತಲೂ ಹೆಚ್ಚು ಇಷ್ಟವಾದುದು ಅವರಿಗೆ ಬೇರೆ ಇರುವುದಿಲ್ಲ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸಿ, ಅವರ ಮುಖ ಮತ್ತು ವಸ್ತ್ರಗಳ ಮೇಲೆ (ಸುವಾಸನೆಯನ್ನು) ಬೀರುತ್ತದೆ. ಆಗ ಅವರ ಸೌಂದರ್ಯ ಮತ್ತು ಅಂದವು ಹೆಚ್ಚಾಗುತ್ತದೆ. ನಂತರ ಅವರು ಆ ಹೆಚ್ಚಾದ ಸೌಂದರ್ಯ ಮತ್ತು ಅಂದದೊಂದಿಗೆ, ತಮ್ಮ ಕುಟುಂಬದವರ ಬಳಿಗೆ ಹಿಂತಿರುಗಿದಾಗ, ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ (ನ್ನು ಬಿಟ್ಟುಹೋದ) ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, (ನಾವು ಬಿಟ್ಟುಹೋದ) ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.