Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 10 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ಓ ಅಲ್ಲಾಹ್, ನಿನಗೆ ನಾನು ಶರಣಾಗಿದ್ದೇನೆ, ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ, ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ, ನಿನ್ನ ಕಡೆಗೆ ತಿರುಗಿದ್ದೇನೆ, ನಿನ್ನ ಸಹಾಯದಿಂದ ವಾದಿಸಿದ್ದೇನೆ. ಓ ಅಲ್ಲಾಹ್, ನೀನು ನನ್ನನ್ನು ದಾರಿತಪ್ಪಿಸದಂತೆ ನಿನ್ನ ಘನತೆಯಿಂದ ನಾನು ನಿನ್ನಲ್ಲಿ ಅಭಯ ಬೇಡುತ್ತೇನೆ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ಯಾವುದೇ ಆರಾಧ್ಯನಿಲ್ಲ. ನೀನು ಶಾಶ್ವತವಾಗಿ ಜೀವಂತವಿರುವವನು, ಎಂದಿಗೂ ಸಾಯದವನು. ಜಿನ್ನ್‌ಗಳು ಮತ್ತು ಮನುಷ್ಯರು ಸಾಯುತ್ತಾರೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ. ಇದು ಮುಸ್ಲಿಂರ ವರದಿ. ಬುಖಾರಿ ಇದನ್ನು ಸಂಕ್ಷಿಪ್ತವಾಗಿ ವರದಿ ಮಾಡಿದ್ದಾರೆ.
"ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ ಹೀಗಿತ್ತು: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ಹೃದಯಗಳನ್ನು ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್-ಅಜ್‌ಝಿ ವಲ್-ಕಸಲಿ ವಲ್-ಜುಬ್‌ನಿ ವಲ್-ಬುಖ್‌ಲಿ ವಲ್-ಹರಮಿ ವ ಅಝಾಬಿಲ್-ಖಬ್ರ್. (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿನ್ನಲ್ಲಿ ಅಶಕ್ತತೆ, ಸೋಮಾರಿತನ, ಹೇಡಿತನ, ಜಿಪುಣತನ, ಅತಿ ವೃದ್ಧಾಪ್ಯ ಮತ್ತು ಸಮಾಧಿಯ ಶಿಕ್ಷೆಯಿಂದ ಅಭಯ ಕೋರುತ್ತೇನೆ). ಅಲ್ಲಾಹುಮ್ಮ ಆತಿ ನಫ್ಸೀ ತಖ್ವಾಹಾ, ವ ಝಕ್ಕಿಹಾ ಅಂತ ಖೈರು ಮನ್ ಝಕ್ಕಾಹಾ, ಅಂತ ವಲಿಯ್ಯುಹಾ ವ ಮೌಲಾಹಾ. (ಅರ್ಥ: ಓ ಅಲ್ಲಾಹನೇ, ನನ್ನ ಆತ್ಮಕ್ಕೆ ಅದರ ತಖ್ವಾವನ್ನು (ದೇವಭಕ್ತಿಯನ್ನು) ನೀಡು, ಮತ್ತು ಅದನ್ನು ಪರಿಶುದ್ಧಗೊಳಿಸು, ನೀನೇ ಅದನ್ನು ಪರಿಶುದ್ಧಗೊಳಿಸುವವರಲ್ಲಿ ಅತ್ಯುತ್ತಮನು. ನೀನೇ ಅದರ 'ವಲೀ' (ರಕ್ಷಕ ಮಿತ್ರ) ಮತ್ತು 'ಮೌಲಾ' (ಒಡೆಯ)). "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಇಲ್ಮಿನ್ ಲಾ ಯನ್‌ಫಅ್, ವ ಮಿನ್ ಖಲ್‌ಬಿನ್ ಲಾ ಯಖ್‌ಶಅ್, ವ ಮಿನ್ ನಫ್‌ಸಿನ್ ಲಾ ತಶ್‌ಬಅ್, ವ ಮಿನ್ ದಅ್‌ವತಿನ್ ಲಾ ಯುಸ್ತಜಾಬು ಲಹಾ". (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ಪ್ರಯೋಜನ ನೀಡದ ಜ್ಞಾನದಿಂದ, ವಿನಯವಿಲ್ಲದ ಹೃದಯದಿಂದ, ಆಸೆ ತೀರದ ಆತ್ಮದಿಂದ, ಮತ್ತು ಸ್ವೀಕರಿಸಲ್ಪಡದ ಪ್ರಾರ್ಥನೆಯಿಂದ ನಿನ್ನಲ್ಲಿ ಅಭಯ ಕೋರುತ್ತೇನೆ).
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಒಬ್ಬ ಅಲೆಮಾರಿ ಅರಬ್ಬ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದನು: “ನನಗೆ ಹೇಳಲು ಕೆಲವು ಪದಗಳನ್ನು ಕಲಿಸಿರಿ.” ಅವರು ಹೇಳಿದರು, “ಹೇಳು: ‘ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಅಲ್ಲಾಹು ಅತ್ಯಂತ ಮಹಾನನು ಮತ್ತು ಸರ್ವೋನ್ನತನು, ಸರ್ವಸ್ತುತಿಗಳು ಹೇರಳವಾಗಿ ಅಲ್ಲಾಹನಿಗೆ, ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಪರಿಶುದ್ಧನಾಗಿದ್ದಾನೆ. ಪ್ರಚಂಡ ಶಕ್ತಿಶಾಲಿ ಮತ್ತು ಪರಮ ಜ್ಞಾನಿಯಾದ ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.’” ಅವನು ಹೇಳಿದನು: “ಈ ಪದಗಳೆಲ್ಲವೂ ನನ್ನ ಪರಿಪಾಲಕನಿಗೆ, ಹಾಗಾದರೆ ನನಗೇನಿದೆ?” ಅವರು ಹೇಳಿದರು, “ಹೇಳು: ‘ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನ್ನ ಮೇಲೆ ಕರುಣೆ ತೋರು, ನನಗೆ ಮಾರ್ಗದರ್ಶನ ಮಾಡು, ಮತ್ತು ನನಗೆ ಉಪಜೀವನವನ್ನು ಒದಗಿಸು.’”
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಓ ಅಲ್ಲಾಹ್! ನನಗೆ ಮಾರ್ಗದರ್ಶನ ನೀಡು ಮತ್ತು ನನ್ನನ್ನು ನೇರವಾಗಿಡು. ಮಾರ್ಗದರ್ಶನವನ್ನು ಬೇಡುವಾಗ ನೇರವಾದ ಮಾರ್ಗದಲ್ಲಿ ಮುನ್ನಡೆಸುವಂತೆ ಬೇಡು ಮತ್ತು ನೇರವಾಗಿರುವುದನ್ನು ಬೇಡುವಾಗ ಬಾಣದಷ್ಟು ನೇರವಾಗಿರುವುದನ್ನು ಬೇಡು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.