Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 5 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ ಮತ್ತು ಸಂಜೆಯಾಗುವಾಗ ಈ ಪ್ರಾರ್ಥನೆಗಳನ್ನು ಪಠಿಸದೆ ಬಿಟ್ಟುಬಿಡುತ್ತಿರಲಿಲ್ಲ: "ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಧರ್ಮದಲ್ಲಿ, ಇಹಲೋಕದಲ್ಲಿ, ಕುಟುಂಬದಲ್ಲಿ ಮತ್ತು ಸಂಪತ್ತಿನಲ್ಲಿ ಕ್ಷಮೆ ಮತ್ತು ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಕುಂದು-ಕೊರತೆಗಳನ್ನು ಮುಚ್ಚಿಡು ಮತ್ತು ನನ್ನ ಭಯವನ್ನು ನಿವಾರಿಸು. ಓ ಅಲ್ಲಾಹ್! ನನ್ನ ಮುಂಭಾಗದಿಂದ, ನನ್ನ ಹಿಂಭಾಗದಿಂದ, ನನ್ನ ಬಲಭಾಗದಿಂದ, ನನ್ನ ಎಡಭಾಗದಿಂದ, ನನ್ನ ಮೇಲ್ಭಾಗದಿಂದ ನನ್ನನ್ನು ರಕ್ಷಿಸು. ನನ್ನ ಕೆಳಭಾಗದಿಂದ ನನ್ನನ್ನು ಹತ್ಯೆಗೈಯಲಾಗುವುದರಿಂದ ನಾನು ನಿನ್ನ ಮಹಾತ್ಮೆಯ ಮೂಲಕ ನಿನ್ನಲ್ಲಿ ರಕ್ಷೆ ಬೇಡುತ್ತೇನೆ."
ಸಹೀಹ್ ಇದನ್ನು ಅಬೂದಾವೂದ್, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಓ ಅಲ್ಲಾಹ್! ನಾನು ನಿನ್ನಲ್ಲಿ ತಕ್ಷಣದ ಮತ್ತು ತಡವಾಗಿರುವ ಎಲ್ಲಾ ಒಳಿತುಗಳನ್ನು ಬೇಡುತ್ತೇನೆ. ಅವುಗಳ ಪೈಕಿ ನಾನು ತಿಳಿದಿರುವುದನ್ನು ಮತ್ತು ತಿಳಿಯದಿರುವುದನ್ನು ಕೂಡ. ನಾನು ನಿನ್ನಲ್ಲಿ ತಕ್ಷಣದ ಮತ್ತು ತಡವಾಗಿರುವ ಎಲ್ಲಾ ಕೆಡುಕುಗಳಿಂದ ರಕ್ಷೆ ಬೇಡುತ್ತೇನೆ. ಅವುಗಳ ಪೈಕಿ ನಾನು ತಿಳಿದಿರುವುದರಿಂದ ಮತ್ತು ತಿಳಿಯದಿರುವುದರಿಂದ ಕೂಡ. ಓ ಅಲ್ಲಾಹ್! ನಿನ್ನ ದಾಸ ಮತ್ತು ನಿನ್ನ ಪ್ರವಾದಿ ಬೇಡಿದ ಎಲ್ಲಾ ಒಳಿತುಗಳನ್ನು ನಾನು ನಿನ್ನಲ್ಲಿ ಬೇಡುತ್ತೇನೆ. ನಿನ್ನ ದಾಸ ಮತ್ತು ನಿನ್ನ ಪ್ರವಾದಿ ರಕ್ಷೆ ಬೇಡಿದ ಎಲ್ಲಾ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ನಾನು ನಿನ್ನಲ್ಲಿ ಸ್ವರ್ಗವನ್ನು ಮತ್ತು ಅದಕ್ಕೆ ಹತ್ತಿರಗೊಳಿಸುವ ಮಾತುಗಳನ್ನು ಮತ್ತು ಕರ್ಮಗಳನ್ನು ಬೇಡುತ್ತೇನೆ. ನಾನು ನಿನ್ನಲ್ಲಿ ನರಕದಿಂದ ಮತ್ತು ಅದಕ್ಕೆ ಹತ್ತಿರಗೊಳಿಸುವ ಮಾತುಗಳಿಂದ ಹಾಗೂ ಕರ್ಮಗಳಿಂದ ರಕ್ಷೆ ಬೇಡುತ್ತೇನೆ. ನೀನು ನನ್ನ ವಿಷಯದಲ್ಲಿ ವಿಧಿಸಿದ ಎಲ್ಲಾ ವಿಧಿಗಳನ್ನು ನನಗೆ ಒಳಿತಾಗಿ ಮಾಡಬೇಕೆಂದು ಬೇಡುತ್ತೇನೆ."
ಸಹೀಹ್ ಇದನ್ನು ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು. ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾವು ನಿಮ್ಮಲ್ಲಿ ಮತ್ತು ನೀವು ತಂದ ಧರ್ಮದಲ್ಲಿ ವಿಶ್ವಾಸವಿಟ್ಟಿದ್ದೇವೆ. ಆದರೂ ನಿಮಗೆ ನಮ್ಮ ಬಗ್ಗೆ ಭಯವೇ?" ಅವರು ಉತ್ತರಿಸಿದರು: "ಹೌದು, ನಿಶ್ಚಯವಾಗಿಯೂ ಹೃದಯಗಳು ಅಲ್ಲಾಹನ ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಇವೆ. ಅವನು ಇಚ್ಛಿಸುವಂತೆ ಅವುಗಳನ್ನು ತಿರುಗಿಸುತ್ತಾನೆ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಓ ಅಲ್ಲಾಹ್! ನಾನು ನಿನ್ನಲ್ಲಿ ಸಾಲದ ಪ್ರಾಬಲ್ಯದಿಂದ, ಶತ್ರುಗಳ ಪ್ರಾಬಲ್ಯದಿಂದ ಮತ್ತು ಶತ್ರುಗಳು ಸಂಭ್ರಮಿಸುವುದರಿಂದ ರಕ್ಷೆ ಬೇಡುತ್ತೇನೆ."
ಸಹೀಹ್ ಇದನ್ನು ನಸಾಈ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಅಲ್ಲಾಹನಲ್ಲಿ ಬೇಡಬಹುದಾದ ಏನನ್ನಾದರೂ ನನಗೆ ಕಲಿಸಿಕೊಡಿ." ಅವರು ಹೇಳಿದರು: "ಅಲ್ಲಾಹನಲ್ಲಿ ಸುರಕ್ಷತೆಯನ್ನು ಬೇಡಿರಿ." ಕೆಲವು ದಿನಗಳ ನಂತರ, ನಾನು ಅವರ ಬಳಿಗೆ ಹೋಗಿ ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಅಲ್ಲಾಹನಲ್ಲಿ ಬೇಡಬಹುದಾದ ಏನನ್ನಾದರೂ ನನಗೆ ಕಲಿಸಿಕೊಡಿ." ಅವರು ನನಗೆ ಹೇಳಿದರು: "ಓ ಅಬ್ಬಾಸ್‌ರವರೇ! ಓ ಅಲ್ಲಾಹನ ಸಂದೇಶವಾಹಕರ ಚಿಕ್ಕಪ್ಪನವರೇ! ಇಹಲೋಕ ಮತ್ತು ಪರಲೋಕದ ಸುರಕ್ಷತೆಗಾಗಿ ಅಲ್ಲಾಹನಲ್ಲಿ ಬೇಡಿರಿ."
ಸಹೀಹ್ ಲಿಗೈರಿಹಿ (ಇತರ ವರದಿಗಳಿಂದಾಗಿ ಸಹೀಹ್). ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.