Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 6 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶದಲ್ಲಿರುವ ಮೋಡಗಳನ್ನು ತಲುಪಿ, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೂ, ನಾನು ನಿನ್ನನ್ನು ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನನ್ನನ್ನು ಭೇಟಿಯಾದರೆ, ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನ ಬಳಿಗೆ ಬರುತ್ತೇನೆ."
ಹಸನ್. ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
"ಮನುಷ್ಯನು ಅವನ ಆಪ್ತ ಸ್ನೇಹಿತನ ಧರ್ಮದಲ್ಲಿರುತ್ತಾನೆ. ಆದ್ದರಿಂದ ನಿಮ್ಮಲ್ಲೊಬ್ಬನು ತಾನು ಯಾರೊಡನೆ ಸ್ನೇಹ ಬೆಳೆಸುತ್ತಿದ್ದೇನೆಂದು ನೋಡಿಕೊಳ್ಳಲಿ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು." [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."
ಹಸನ್. ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಯಾರು ಇತರರಿಗೆ ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಇತರರಿಗೆ ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ."
ಹಸನ್. ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.