Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 5 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ಸರ್ವಶಕ್ತನಾದ ಅಲ್ಲಾಹು ಸ್ವರ್ಗವಾಸಿಗಳೊಡನೆ ಕೇಳುವನು: "ಓ ಸ್ವರ್ಗವಾಸಿಗಳೇ!" ಅವರು ಉತ್ತರಿಸುವರು: "ನಾವು ನಿನಗೆ ಓಗೊಡುತ್ತಿದ್ದೇವೆ ಮತ್ತು ನಿನ್ನ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ." ಅವನು ಕೇಳುವನು: "ನಿಮಗೆ ತೃಪ್ತಿಯಾಗಿದೆಯೇ?" ಅವರು ಉತ್ತರಿಸುವರು: "ನಮಗೆ ತೃಪ್ತಿಯಾಗದಿರಲು ಹೇಗೆ ಸಾಧ್ಯ? ನೀನಂತೂ ನಿನ್ನ ಸೃಷ್ಟಿಗಳಲ್ಲಿ ಯಾರಿಗೂ ನೀಡದೇ ಇರುವುದನ್ನು ನಮಗೆ ನೀಡಿರುವೆ." ಅವನು ಹೇಳುವನು: "ನಾನು ಅದಕ್ಕಿಂತಲೂ ಶ್ರೇಷ್ಠವಾದುದನ್ನು ನಿಮಗೆ ನೀಡುವೆನು." ಅವರು ಕೇಳುವರು: "ಓ ನಮ್ಮ ಪರಿಪಾಲಕನೇ! ಇದಕ್ಕಿಂತಲೂ ಶ್ರೇಷ್ಠವಾದುದು ಇನ್ನೇನಿದೆ?" ಅವನು ಉತ್ತರಿಸುವನು: "ನಾನು ನನ್ನ ಸಂತೃಪ್ತಿಯನ್ನು ನಿಮ್ಮ ಮೇಲೆ ಸುರಿಸುವೆನು. ಇನ್ನು ನಾನು ನಿಮ್ಮೊಂದಿಗೆ ಎಂದಿಗೂ ಕೋಪಿಸಿಕೊಳ್ಳಲಾರೆನು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಅಲಿ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಯಮನ್‌ನಿಂದ ಅಲ್ಲಾಹುವಿನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಿಕ್ಕ ಚಿನ್ನದ ತುಂಡನ್ನು, ಕರಝ್ (ಒಂದು ರೀತಿಯ ಎಲೆ) ನಿಂದ ಹದಮಾಡಿದ ತೊಗಲ ಚೀಲದಲ್ಲಿ ಕಳುಹಿಸಿದರು. ಆ ಚಿನ್ನವನ್ನು ಅದರ ಮಣ್ಣಿನಿಂದ ಇನ್ನೂ ಬೇರ್ಪಡಿಸಿರಲಿಲ್ಲ. ವರದಿಗಾರರು ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನಾಲ್ಕು ಜನರ ನಡುವೆ ಹಂಚಿದರು: ಉಯೈನಾ ಬಿನ್ ಬದ್ರ್, ಅಖ್ರಅ್ ಬಿನ್ ಹಾಬಿಸ್, ಝೈದ್ ಅಲ್-ಖೈಲ್, ಮತ್ತು ನಾಲ್ಕನೆಯವರು ಅಲ್ಕಮಾ ಅಥವಾ ಆಮಿರ್ ಬಿನ್ ತುಫೈಲ್ ಆಗಿರಬಹುದು. ಆಗ ಅವರ ಸಹಾಬಿಗಳಲ್ಲಿ ಒಬ್ಬ ವ್ಯಕ್ತಿ ಹೇಳಿದರು: "ಇವರಿಗಿಂತ ನಾವೇ ಇದಕ್ಕೆ ಹೆಚ್ಚು ಅರ್ಹರಾಗಿದ್ದೆವು". ವರದಿಗಾರರು ಹೇಳುತ್ತಾರೆ: ಈ ವಿಷಯವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಲುಪಿದಾಗ ಅವರು ಹೇಳಿದರು: "ನೀವು ನನ್ನನ್ನು ನಂಬುವುದಿಲ್ಲವೇ? ನಾನು ಆಕಾಶದಲ್ಲಿರುವವನ (ಅಲ್ಲಾಹುವಿನ) ನಂಬಿಗಸ್ಥ ದಾಸನಾಗಿದ್ದೇನೆ. ನನಗೆ ಆಕಾಶದ ಸುದ್ದಿ (ದಿವ್ಯಸಂದೇಶ) ಬೆಳಿಗ್ಗೆ ಮತ್ತು ಸಂಜೆ ಬರುತ್ತದೆ". ವರದಿಗಾರರು ಹೇಳುತ್ತಾರೆ: ಆಗ ಒಬ್ಬ ವ್ಯಕ್ತಿ ಎದ್ದು ನಿಂತನು - ಅವನ ಕಣ್ಣುಗಳು ಕುಳಿಬಿದ್ದಿದ್ದವು, ಕೆನ್ನೆಗಳು ಎತ್ತರವಾಗಿದ್ದವು, ಹಣೆ ಉಬ್ಬಿತ್ತು, ಗಡ್ಡ ದಟ್ಟವಾಗಿತ್ತು, ತಲೆ ಬೋಳಿಸಲಾಗಿತ್ತು, ಮತ್ತು ಪಂಚೆಯನ್ನು ಮೇಲೆತ್ತಿ ಕಟ್ಟಲಾಗಿತ್ತು. ಅವನು ಹೇಳಿದನು: "ಓ ಅಲ್ಲಾಹುವಿನ ಸಂದೇಶವಾಹಕರೇ, ಅಲ್ಲಾಹುವನ್ನು ಭಯಪಡಿರಿ (ತಖ್ವಾ ಪಾಲಿಸಿರಿ)!". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿನಗೆ ವಿನಾಶವಾಗಲಿ! ಭೂಮಿಯ ಜನರಲ್ಲಿ ಅಲ್ಲಾಹುವನ್ನು ಭಯಪಡಲು ಅತ್ಯಂತ ಅರ್ಹನಾದವನು ನಾನಲ್ಲವೇ?!". ವರದಿಗಾರರು ಹೇಳುತ್ತಾರೆ: ನಂತರ ಆ ವ್ಯಕ್ತಿ ಹೊರಟುಹೋದನು. ಖಾಲಿದ್ ಬಿನ್ ವಲೀದ್ ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಅವನ ಕುತ್ತಿಗೆಯನ್ನು ಕತ್ತರಿಸಿಬಿಡಲೇ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬೇಡ, ಬಹುಶಃ ಆತ ನಮಾಝ್ ಮಾಡುವವನಾಗಿರಬಹುದು". ಆಗ ಖಾಲಿದ್ ಹೇಳಿದರು: "ಎಷ್ಟೋ ನಮಾಝ್ ಮಾಡುವವರಿದ್ದಾರೆ. ಅವರು ತಮ್ಮ ಹೃದಯದಲ್ಲಿ ಇಲ್ಲದ್ದನ್ನು ತಮ್ಮ ನಾಲಿಗೆಯಿಂದ ಹೇಳುತ್ತಾರೆ!" ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಜನರ ಹೃದಯಗಳನ್ನು ಶೋಧಿಸಲು ಅಥವಾ ಅವರ ಹೊಟ್ಟೆಗಳನ್ನು ಸೀಳಲು ಆಜ್ಞಾಪಿಸಲ್ಪಟ್ಟವನಲ್ಲ". ವರದಿಗಾರರು ಹೇಳುತ್ತಾರೆ: ನಂತರ ಅವನು (ಆ ವ್ಯಕ್ತಿ) ಹಿಂತಿರುಗಿ ಹೋಗುತ್ತಿದ್ದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವನ ಕಡೆಗೆ ನೋಡಿ ಹೇಳಿದರು: "ಖಂಡಿತವಾಗಿಯೂ ಈತನ ಸಂತತಿಯಿಂದ ಒಂದು ಗುಂಪು ಉದ್ಭವವಾಗುತ್ತದೆ. ಅವರು ಅಲ್ಲಾಹುವಿನ ಗ್ರಂಥವನ್ನು ತಾಜಾತನದಿಂದ ಪಠಿಸುತ್ತಾರೆ, ಆದರೆ ಅದು ಅವರ ಗಂಟಲುಗಳನ್ನು ದಾಟುವುದಿಲ್ಲ (ಅವರ ಹೃದಯಗಳನ್ನು ತಲುಪುವುದಿಲ್ಲ). ಹೇಗೆ ಬಾಣವು ಲಕ್ಷ್ಯದಿಂದ (ಹೊರ)ಬೀಳುತ್ತದೆಯೋ ಹಾಗೆಯೇ ಅವರು ಧರ್ಮದಿಂದ ಹೊರಹೋಗುತ್ತಾರೆ." ವರದಿಗಾರರು ಹೇಳುತ್ತಾರೆ: ಮತ್ತು ಅವರು (ಪ್ರವಾದಿಯವರು) ಹೀಗೆ ಹೇಳಿದರು ಎಂದು ನಾನು ಭಾವಿಸುತ್ತೇನೆ: "ಒಂದು ವೇಳೆ ನಾನು ಅವರನ್ನು (ಅವರ ಕಾಲವನ್ನು) ತಲುಪಿದರೆ, ಖಂಡಿತವಾಗಿಯೂ ನಾನು ಅವರನ್ನು 'ಸಮೂದ್' ಜನಾಂಗವನ್ನು ಕೊಂದಂತೆ ಕೊಲ್ಲುತ್ತೇನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ನಡವಳಿಕೆಗಳನ್ನು ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸಲಿದ್ದೀರಿ. ಎಲ್ಲಿಯವರೆಗೆಂದರೆ, ಅವರೊಂದು ಓತಿಯ ಬಿಲದೊಳಗೆ ನುಸುಳಿದರೆ ನೀವು ಕೂಡ ಅವರನ್ನು ಹಿಂಬಾಲಿಸುವಿರಿ." ನಾವು ಕೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಯಹೂದಿಗಳು ಮತ್ತು ಕ್ರೈಸ್ತರೇ?" ಅವರು ಉತ್ತರಿಸಿದರು: “ಅವರಲ್ಲದೆ ಇನ್ನಾರು?"
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾವಾಗ ಮೃತದೇಹವನ್ನು (ಜನಾಝಾವನ್ನು) ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ ಆತ್ಮವಾಗಿದ್ದರೆ (ಪುಣ್ಯಾತ್ಮವಾಗಿದ್ದರೆ) ಅದು ಹೇಳುತ್ತದೆ: 'ನನ್ನನ್ನು ಬೇಗ ಮುಂದೆ ಕೊಂಡೊಯ್ಯಿರಿ'. ಒಂದು ವೇಳೆ ಅದು ಸಜ್ಜನ ಆತ್ಮವಾಗಿರದಿದ್ದರೆ (ಪಾಪಿ ಆತ್ಮವಾಗಿದ್ದರೆ) ಅದು ಹೇಳುತ್ತದೆ: 'ಅಯ್ಯೋ ನನ್ನ ದುರ್ಗತಿಯೇ! ಇವರು ಇದನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ?' ಅದರ ಧ್ವನಿಯನ್ನು ಮನುಷ್ಯನ ಹೊರತು ಪ್ರತಿಯೊಂದು ವಸ್ತುವೂ ಕೇಳುತ್ತದೆ. ಒಂದು ವೇಳೆ ಮನುಷ್ಯನು ಅದನ್ನು ಕೇಳಿದ್ದರೆ, ಅವನು ಮೂರ್ಛೆ ಹೋಗುತ್ತಿದ್ದನು."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.